ಮನೆಯಲ್ಲಿ ಒಂಟಿಯಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿ ಹೃದಯಾಘಾತದಿಂದ ಮೃತ್ಯು
Update: 2021-06-29 22:55 IST
ಮಡಿಕೇರಿ, ಜೂ.29: ಮನೆಯಲ್ಲಿ ಒಬ್ಬಂಟಿಯಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಳಿತಲ್ಲೇ ಪ್ರಾಣ ಬಿಟ್ಟ ಘಟನೆ ಮಾದಾಪುರ ಬಳಿಯ ಕುಂಬೂರು ಗ್ರಾಮದಲ್ಲಿ ನಡೆದಿದೆ.
ಪಟ್ಟಮಾಡ ದಿ.ಮಂದಣ್ಣ ಅವರ ಪುತ್ರ ಸುಬ್ಬಯ್ಯ (67) ಎಂಬವರೇ ಮೃತಪಟ್ಟರು. ಕೋವಿಡ್ ಸೋಂಕಿಗೆ ಒಳಗಾಗಿದ್ದ ಇವರು ಮನೆಯಲ್ಲಿ ಸಂಪರ್ಕ ತಡೆಯಲಿದ್ದರು. ಕಳೆದ ಮೂರು ದಿನಗಳಿಂದ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಸಂಶಯಗೊಂಡು ನಿನ್ನೆ ರಾತ್ರಿ ಶಾಸಕ ರಂಜನ್ ಅವರಿಗೆ ಮಾಹಿತಿ ನೀಡಿದರು.
ಇಂದು ಬೆಳಗ್ಗೆ ಶಾಸಕರು ಪಿಪಿಇ ಕಿಟ್ ಧರಿಸಿ, ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜೊತೆಗೆ ಮನೆಗೆ ತೆರಳಿ ಬಾಗಿಲು ತೆಗೆದು ನೋಡಿದಾಗ ಕುರ್ಚಿಯಲ್ಲಿ ಕುಳಿತಿದ್ದ ಸ್ಥಿತಿಯಲ್ಲಿ ಸುಬ್ಬಯ್ಯ ಮೃತದೇಹ ಪತ್ತೆಯಾಗಿದೆ.
ಸಾವನ್ನಪ್ಪಿ ಎಷ್ಟು ದಿನಗಳಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ತರಲಾಯಿತು.