ರಾಜ್ಯದಲ್ಲಿ ಜುಲೈ 5ರ ಬಳಿಕೆ ಲಾಕ್ ಡೌನ್ ಇನ್ನಷ್ಟು ಸಡಿಲಿಕೆ: ಸಚಿವ ಅಶೋಕ್
ಬೆಂಗಳೂರು, ಜೂ.30: ರಾಜ್ಯದಲ್ಲಿ ಜುಲೈ 5ರಿಂದ ಇನ್ನಷ್ಟು ಲಾಕ್ಡೌನ್ ಸಡಿಲಿಕೆ ಆಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜನರು ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟದಲ್ಲಿರುವ ಕಾರಣ ಜುಲೈ ಐದರ ಮುಂಚಿತವಾಗಿಯೇ ಲಾಕ್ಡೌನ್ ಸಡಿಲಿಸುವ ಮುನ್ಸೂಚನೆ ನೀಡಿದರು.
ಡಿಸೆಂಬರ್ ಒಳಗೆ ರಾಜ್ಯದ ಎಲ್ಲಾ ಜನರಿಗೆ 2 ಡೋಸ್ ಕೋವಿಡ್ ಲಸಿಕೆ ಹಾಕಲು ತಯಾರಿ ಮಾಡುತ್ತಿದ್ದೇವೆ. ಕೊರೋನ ಮೂರನೇ ಅಲೆ ತಡೆಗಟ್ಟಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲು ಮುಖ್ಯಮಂತ್ರಿಗೆ ಸಲಹೆ ನೀಡಿದ್ದು ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊರೋನ ಹಾವಳಿ ಹೆಚ್ಚಿದ್ದ ಸಂದರ್ಭದಲ್ಲೂ ಸಹ ಮನೆಯಲ್ಲಿ ಕೂರದೆ ಹೊರಬಂದು ಜನರ ಸಂಕಷ್ಟವನ್ನು ಆಲಿಸಿದ್ದಾರೆ. ಆದರೆ ನೆರೆ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಈ ರೀತಿ ಕಾರ್ಯನಿರ್ವಹಿಸಿಲ್ಲ ಎಂದು ಟೀಕಿಸಿದ ಅವರು, ಯಡಿಯೂರಪ್ಪರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.