×
Ad

ರಾಜ್ಯದಲ್ಲಿ ಮುಂದಿನ 20 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರೊಲ್ಲ: ಸಚಿವ ಆರ್.ಅಶೋಕ್

Update: 2021-06-30 14:49 IST

ಹಾಸನ, ಜೂ.30: ಯಾರಿಗೆ ಸಿಎಂ ಕುರ್ಚಿ ಎಂಬ ವಿಚಾರದಲ್ಲೇ ಆಂತರಿಕ ಜಗಳದಲ್ಲಿ ತಲ್ಲೀನವಾಗಿರುವ ಕಾಂಗ್ರೆಸ್ ಪಕ್ಷ ಮುಂದಿನ 20 ವರ್ಷಗಳ ವರೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಪಕ್ಷದಲ್ಲಿ ಸಮನ್ವಯತೆ ಇಲ್ಲ, ಪಕ್ಷದ ರೈಲು ಇನ್ನೂ ಟ್ರ್ಯಾಕ್ ಗೆ ಇಳಿದಿಲ್ಲ. ಕೇಂದ್ರದಲ್ಲೂ ಸಹ ಸಮರ್ಥ ವಿರೋಧ ಪಕ್ಷದ ನಾಯಕರು ಇಲ್ಲದೆ ತಬ್ಬಿಬ್ಬಾಗಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಜಾತಿ ರಾಜಕೀಯದಲ್ಲಿ ತೊಡಗಿರುವ ಪಕ್ಷದಲ್ಲಿ ಸಂವಿಧಾನ ಬದಲಾವಣೆ ಮೂಲಕ ಜಾತಿಗೊಂದರಂತೆ ಸಿಎಂ ಕುರ್ಚಿಯನ್ನು ಸೃಷ್ಟಿ ಮಾಡಬೇಕು ಅಷ್ಟೇ... ಅದು ಸಹ ಕಷ್ಟ ಸಾಧ್ಯ ಆದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸುಳ್ಳು ಎಂದು ಹೇಳಿದರು.

ಎರಡು ವರ್ಷ ಬಿಎಸ್ ವೈ ಸಿಎಂ:

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ಯಡಿಯೂರಪ್ಪ ಮುಂದಿನ ಮೂರನೇ ಅಲೆಯನ್ನು ಸಹ ಅವರ ನೇತೃತ್ವದಲ್ಲಿಯೇ ನಿರ್ವಹಣೆ ಮಾಡಲಾಗುವುದು ಹಾಗೂ 2 ವರ್ಷದವರೆಗೆ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಎಂದು ಪುನರುಚ್ಚರಿಸಿದರು.

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ನಮ್ಮ ಸಹಮತವಿದೆ. ಸರ್ಕಾರ ರಚನೆಯಾಗಲು ರಮೇಶ್ ಜಾರಕಿಹೊಳಿ ಅವರ ಶ್ರಮ ಸಾಕಷ್ಟಿದೆ ಈಗ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರಕಾರದ ಬಗ್ಗೆ ಸ್ವಪಕ್ಷದ ಎಚ್.ವಿಶ್ವನಾಥ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಪಕ್ಷದ ಬಗ್ಗೆ ಸರ್ಕಾರದ ಬಗ್ಗೆ ಮಾತನಾಡಬಾರದು ಎಂದು ರಾಜ್ಯಕ್ಕೆ ಭೇಟಿ ನೀಡಿದ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ .

ಅಲ್ಲದೆ ಬಿಜೆಪಿ ವಿರುದ್ಧ ಮಾತನಾಡುವ ನಾಯಕರ ಬಗ್ಗೆ ವರದಿ ಕಳುಹಿಸಿಕೊಡಲು ಸಹ ಸೂಚನೆ ನೀಡಿದ್ದು, ಆದ್ದರಿಂದ ಯತ್ನಾಳ್ - ಬೆಲ್ಲದ್ ಮಾತನಾಡುತ್ತಿಲ್ಲ ಎಂದು ಹೇಳಿದರು.

'ಸಿಪಿ ಯೋಗೇಶ್ವರ್ ಪರೀಕ್ಷೆ ಬರೆದಿದ್ದು ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ' ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್, ಅವರ ಹೇಳಿಕೆ ಗಮನಿಸಿಲ್ಲ, ಹೀಗಾಗಿ ಅದರ ಬಗ್ಗೆ ಏನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಕಾಂಗ್ರೆಸ್ ನಲ್ಲಿ ಬಂಡಾಯ ಏಳುವ ಸ್ಥಿತಿ ನಿರ್ಮಾಣವಾಗಿದೆ ಹಲವಾರು ಕಾಂಗ್ರೆಸ್ಸಿಗರು ಚುನಾವಣೆ ಒಂದು ವರ್ಷ ಇದ್ದಹಾಗೆ ಬಿಜೆಪಿಗೆ ಬರಲಿದ್ದಾರೆ ಎಂದ ಅವರು ಕಾಂಗ್ರೆಸ್ ಪಕ್ಷದಿಂದ 15 ಮಂದಿಯನ್ನು ನಾವು ಕರೆದುಕೊಂಡು ಬಂದಿದ್ದೇವೆ ಈ ಮೂಲಕ ನಮ್ಮ ಶಕ್ತಿಪ್ರದರ್ಶನ ಮಾಡಿದ್ದು ಅವರು ಬಿಜೆಪಿಯಿಂದ ಎಷ್ಟುಮಂದಿ ಕರೆದುಕೊಂಡು ಹೋಗುತ್ತಾರೆ ಕಾದು ನೋಡುವ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News