ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೊಂದಲದ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಪ್ರತಿಕ್ರಿಯೆ ಏನು ?
ಬೆಂಗಳೂರು, ಜೂ. 30: `ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದ ಗೊಂದಲವನ್ನು ವಿವರಿಸುವ ಅಗತ್ಯವಿಲ್ಲ, ಈ ಬಗ್ಗೆ ಏನೂ ಹೇಳಲು ಆಗುವುದಿಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೌನಕ್ಕೆ ಶರಣಾಗಿದ್ದಾರೆ.
ಬುಧವಾರ ಪ್ರತ್ಯೇಕವಾಗಿ ಮಾತನಾಡಿದ ಉಭಯ ನಾಯಕರು, ಸ್ಪಷ್ಟ ಉತ್ತರ ನೀಡಿಲ್ಲ. ಹೀಗಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ಗೊಂದಲ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. `ನಾನು ಕೊಟ್ಟಿರುವ ಸಲಹೆಯನ್ನು ನಿಮಗೆ ಹೇಳಲು ಆಗುವುದಿಲ್ಲ. ಅವರಿಗೆ ಹೇಳಿರೋದನ್ನು ನಿಮಗೆ ಹೇಗೆ ತಿಳಿಸಲಿ? ಅವರು ಎಲೆಕ್ಷನ್ ಆಫೀಸರ್ ಏನೋ ಒಂದು ಕಾಂಪ್ರಮೈಸ್ ಮಾಡ್ತೀವಿ ಎಂದು ಹೇಳಿದ್ದಾರೆ. ಇಬ್ಬರನ್ನೂ ಕೂರಿಸಿಕೊಂಡು ಕಾಂಪ್ರಮೈಸ್ ಮಾಡಿ ಎಂದು ಸಲಹೆ ನೀಡಿದ್ದೇನೆ. ಇನ್ನು ಆರು ತಿಂಗಳು ಮಾತ್ರ ರಕ್ಷಾ ರಾಮಯ್ಯ ಅಧ್ಯಕ್ಷರಾಗಿರಲಿದ್ದಾರೆಂಬ ವಿಚಾರ ನನಗೆ ಗೊತ್ತಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೌನವಾಗಿ ಹೊರಟು ಹೋಗುವ ಮೂಲಕ ಸಮಸ್ಯೆ ಜಟಿಲವಾಗಿದೆ ಎಂದು ಸೂಚಿಸಿದರು. `ನಾಳೆಯಿಂದ ಜನ ಸಂಪರ್ಕ ಯಾತ್ರೆ ಇದೆ. ನಮ್ಮ ಕಾಂಗ್ರೆಸ್ ಮುಖಂಡರು, ಜಿಲ್ಲಾಧ್ಯಕ್ಷರು ಹೋಗುತ್ತಾರೆ. ಕೊರೋನದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ನಾನು ಎಲ್ಲಿಗೆ ಹೋಗಬೇಕು ಎಂದು ಕಾರ್ಯಕ್ರಮ ಪಟ್ಟಿ ಸಿದ್ಧವಾಗಿಲ್ಲ. ಒಂದಷ್ಟು ಸಮಸ್ಯೆಗಳಿವೆ, ಅವುಗಳನ್ನು ಬಗೆಹರಿಸಬೇಕು. ಆಮೇಲೆ ಜನ ಸಂಪರ್ಕ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ' ಎಂದು ಶಿವಕುಮಾರ್ ನುಡಿದರು.