ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋಗಿ ಬಂದಿರುವ ಇತಿಹಾಸವಿದೆ: ಬಿಎಸ್‌ವೈ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ

Update: 2021-06-30 15:22 GMT

ಬೆಂಗಳೂರು, ಜೂ. 30: `ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇನು ಪ್ರಧಾನಿಯೇ? ಅವರಿಗೆ ಅಷ್ಟೊಂದು ಬಿಲ್ಡಪ್ ಕೊಡುವ ಅಗತ್ಯವಿಲ್ಲ. ಅವರ ಬರುವಾಗಲೇ ಗೊತ್ತಿತ್ತು, ಅವರೇನು ಹೇಳಬಹುದೆಂದು' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, `ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ಕೊಡುವಾಗಲೇ ಗೊತ್ತಿತ್ತು, ನಾಯಕತ್ವ ಬದಲಾವಣೆ ವಿಚಾರವಾಗಿ ಅವರೇನು ಹೇಳುತ್ತಾರೆಂದು. ಗೊತ್ತಿದ್ದೇ ಅವರನ್ನು ಭೇಟಿಯಾಗಿಲ್ಲ. ಏರ್ ಪೋರ್ಟ್ ಗೆ ಬಂದಿದ್ದೇನು, ಕೆ.ಕೆ.ಗೆಸ್ಟ್ ಹೌಸ್‍ನಲ್ಲಿ ಕೈಬೀಸಿದ್ದೇನು, ಆ ಲೆವಲ್‍ಗೆ ಬಿಲ್ಡಪ್ ಕೊಡಲು ಅವರೇನು ಪ್ರಧಾನಿನಾ? ಏನ್ ಹೇಳ್ತಾರೆಂಬುದನ್ನು ಏರ್ ಪೋರ್ಟ್ ನಲ್ಲೇ ಹೇಳಿದರು. ಇಲ್ಲಿ ಬಂದು ಅಭಿಪ್ರಾಯ ಕೇಳಿದಂತೆ ಮಾಡಿ ವರಿಷ್ಠರಿಗೆ ವರದಿ ಒಪ್ಪಿಸಿದ್ದಾರೆ ಅಷ್ಟೇ' ಎಂದು ಟೀಕಿಸಿದರು.

ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋಗಿ ಬಂದಿರುವ ಇತಿಹಾಸವಿದೆ. ಆ ಇತಿಹಾಸ ಮತ್ತೆ ಮರುಕಳಿಸಬಾರದು. ನಮ್ಮ ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ವಿಶ್ವಾಸವಿದೆ. ಬಿ.ವೈ.ವಿಜಯೇಂದ್ರ ಎಲ್ಲರನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ಪದೇ-ಪದೇ ತಪ್ಪು ಮಾಡಿದರೆ ಸಹಿಸುವುದಿಲ್ಲ. ದುಷ್ಟರಿಗೂ ಕಾಲ ಇರುತ್ತೆ. ಆದರೆ, ಎಲ್ಲ ಸಮಯದಲ್ಲಿಯೂ ನಡೆಯಲ್ಲ. ಎಲ್ಲದಕ್ಕೂ ಕಾಲ ಕೂಡಿಬರಬೇಕು' ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೆ ದಾಟಿಯಲ್ಲೇ ವಿಶ್ಲೇಷಿಸಿದರು.

`ಪಂಚಮಸಾಲಿ ಹೋರಾಟದಲ್ಲಿ ನಗ್ನ ಪ್ರದರ್ಶನ ಮಾಡಿದ ರಾಜಕಾರಣಿ ಈಗ ಸಂಪೂರ್ಣ ನಗ್ನರಾಗಿದ್ದಾರೆ. ಈ ಹೋರಾಟವನ್ನು ಒಬ್ಬ ಸಚಿವ ಮತ್ತು ಉದ್ಯಮಿ ತಮ್ಮ ರಾಜಕೀಯ ಉಪಯೋಗಕ್ಕೆ ಬಳಕೆ ಮಾಡಿದ್ದಾರೆ' ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ದ ವಾಗ್ದಾಳಿ ನಡೆಸಿದ ಯತ್ನಾಳ್, `ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ನನ್ನ ಭೇಟಿಯಲ್ಲಿ ಯಾವುದೇ ರಾಜಕೀಯ ಇರಲಿಲ್ಲ. ಯೋಗೇಶ್ವರ್ ಪರೀಕ್ಷೆ ಬರೆದಿರುವುದಾಗಿ ಹೇಳಿದ್ದಾರೆ. ನಾನಂತೂ ಯಾವುದೇ ಪರೀಕ್ಷೆ ಬರೆದಿಲ್ಲ' ಎಂದು ಸ್ಪಷ್ಟನೆ ನೀಡಿದರು.

ದುಷ್ಟರ ಸಂಹಾರ ಆಗಬೇಕು. ಅದರಿಂದ ದೇಶ, ರಾಜ್ಯ ಮತ್ತು ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಆದಿಲ್‍ಶಾಹಿ, ಟಿಪ್ಪು, ಮೊಗಲ್ ಮನೆತನ ಮೆರೆದಾಡಿ ನಾಶ ಆಗಿ ಹೋಯಿತಲ್ಲ. ಅದೇ ರೀತಿ. ಏನೇನೋ ಮಾಡ್ತಾರೆ, ಅದರಿಂದ ಮುಂದೆ ಪರಿಣಾಮ ಅನುಭವಿಸಬೇಕಾಗುತ್ತದೆ. ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಿಂದೆ ಜೈಲಿಗೆ ಹೋದ ಉದಾಹರಣೆ ಇದೆಯಲ್ಲ. ಮುಂದೆ ಆ ರೀತಿ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ'

-ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ನಗರ ಕ್ಷೇತ್ರದ ಶಾಸಕ

`ಹಾದಿ-ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ. ಇನ್ನೂ ಸಮಾಜದ ಬಗ್ಗೆಯೂ ಮಾತನಾಡಲ್ಲ. ವೀರಶೈವ ಲಿಂಗಾಯತ ಸಮಾಜ ಪ್ರಜ್ಞಾವಂತ ಸಮಾಜ ಇದೆ. ಪಂಚಮಸಾಲಿ ಹೋರಾಟವನ್ನು ಯಾರು ದುರ್ಬಳಕೆ ಮಾಡಿದ್ದಾರೆಂಬುದು ಚುನಾವಣೆಯಲ್ಲಿ ನಿರ್ಧಾರವಾಗಲಿದೆ. ಪಕ್ಷದ ಶಿಸ್ತು ಉಲ್ಲಂಘನೆ ವಿಚಾರವಾಗಿ ಅವರು ಸೂಕ್ತ ಸಂದರ್ಭದಲ್ಲಿ ಕ್ರಮ ವಹಿಸಲಿದ್ದಾರೆ. ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಇನ್ನೂ ಎರಡು ವರ್ಷ ಬಿಎಸ್‍ವೈ ಅವರೇ ಮುಖ್ಯಮಂತ್ರಿ'

-ಮುರುಗೇಶ್ ಆರ್.ನಿರಾಣಿ, ಗಣಿ ಮತ್ತು ಭೂವಿಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News