ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ: ಉದ್ಯಮಿ ಪ್ರಭಾಕರ್ ರೆಡ್ಡಿ ಸ್ಪಷ್ಟನೆ
Update: 2021-06-30 21:34 IST
ಬೆಂಗಳೂರು, ಜೂ.30: ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಹೊರತು ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಜೆಡಿಎಸ್ ಮುಖಂಡ, ಉದ್ಯಮಿ ಪ್ರಭಾಕರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಇಲ್ಲಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂಬ ವದಂತಿ ಹರಿದಾಡಿತ್ತು.
ಈ ಸಂಬಂಧ ಆಸ್ಪತ್ರೆಯಿಂದಲೇ ವಿಡಿಯೊ ಮೂಲಕ ಪ್ರತಿಕ್ರಿಯಿಸಿರುವ ಪ್ರಭಾಕರ್ ರೆಡ್ಡಿ, ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವದಂತಿ ಹಬ್ಬಿದೆ. ಅದನ್ನು ನಂಬಬೇಡಿ ಎಂದರು.
ಇತ್ತೀಚಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಶ್ವಾಸಕೋಶ ಮತ್ತು ಗಂಟಲಿನಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾವುದೇ ಸಮಸ್ಯೆಯೂ ಇಲ್ಲ ಎಂದು ತಿಳಿಸಿದರು.