ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಬಂಧನ ಯಾವಾಗ: ಗೃಹ ಸಚಿವ ಬೊಮ್ಮಾಯಿಗೆ ಡಿಕೆಶಿ ಪ್ರಶ್ನೆ
ಬೆಂಗಳೂರು, ಜೂ. 30: `ಅತ್ಯಾಚಾರ ಆರೋಪಿಗೆ ರಾಜ್ಯ ಬಿಜೆಪಿ ಪಕ್ಷದವರೇ ಬೆನ್ನಿಗೆ ಚೂರಿ ಹಾಕಿದ್ದಾರಂತೆ, ಅಂತೂ-ಇಂತೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೋಣೆಯಲ್ಲಿ ಕ್ಯಾಮೆರಾ ಇಟ್ಟ ಮಹಾನಾಯಕರನ್ನು ಬಿಜೆಪಿಯಲ್ಲಿ ಹುಡುಕಿದ್ದಾರೆ ಎಂದಾಯ್ತು! ಇವರು ಪಾಠ ಕಲಿಸುವ ಮೊದಲು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ನಡೆಸುವುದೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ?!' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಪಕ್ಷ ಸಿಎಂ ಸೀಟ್‍ನ್ನ ಕೆಎಸ್ಸಾರ್ಟಿಸಿ ಬಸ್ಸಿನ ಸೀಟ್‍ನಂತೆ ಮಾಡಿದ್ದಾರೆ, ಎಲ್ಲರೂ ಟವೆಲ್, ಕರ್ಚಿಫ್ ಎಸೆದು ರಿಸರ್ವ್ ಮಾಡುವವರೇ. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್ ನಂತರ ಬಿಜೆಪಿಯಲ್ಲಿ ಮತ್ತೊಬ್ಬ ಸಿಎಂ ಆಕಾಂಕ್ಷಿ ಹುಟ್ಟಿದ್ದಾರೆ. ಬಿಜೆಪಿ ಪಕ್ಷಕ್ಕೆ ದಿಢೀರ್ ಆಗಿ `ನಾನೂ ಸಿಎಂ' ಸಿಂಡ್ರೋಮ್ ಅಂಟಿಕೊಂಡಿದೆ!' ಎಂದು ಲೇವಡಿ ಮಾಡಿದ್ದಾರೆ.
ಓಟಿಗಾಗಿ ವ್ಯಾಕ್ಸಿನ್: `ಬಿಜೆಪಿ ಮೊದಲಿಂದಲೂ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಸುತ್ತಿರುವುದು ಬಟಾಬಯಲಾಗಿದೆ. ಲಸಿಕಾ ಕೇಂದ್ರಗಳಲ್ಲಿ ನೋ ವ್ಯಾಕ್ಸಿನ್ ಬೋರ್ಡ್ ಹಾಕಿ, ಉಚಿತ ಲಸಿಕೆಗಳನ್ನು ಬಿಜೆಪಿಗರ ಮನೆಗಳಿಗೆ ಸಾಗಿಸಿದ ನಂತರ 'ಓಟಿಗಾಗಿ ವ್ಯಾಕ್ಸಿನ್' ಹಗರಣ ನಡೆಯುತ್ತಿದೆ. ಲಸಿಕೆಗಳು ಆರೋಗ್ಯ ಕೇಂದ್ರಗಳ ಬದಲು ಬಿಜೆಪಿಗರ ಕಚೇರಿಯಲ್ಲಿ ಸಿಗುತ್ತಿವೆ. 2ನೆ ಡೋಸ್ ಪಡೆಯದ ಹೊರತು ಲಸಿಕೆ ಪ್ರಭಾವಿಯಲ್ಲ ಎಂದು ತಜ್ಞರು ಹೇಳಿದ್ದಾರೆ, ಇದುವರೆಗೂ ಕೇವಲ ಶೇ.5ರಷ್ಟು ಜನತೆ ಮಾತ್ರ 2 ಡೋಸ್ ಪಡೆದಿದ್ದಾರೆ. ಖಾಸಗಿಯವರಿಗೆ ಭರಪೂರ ಲಸಿಕೆ ಸಿಗುತ್ತಿರುವಾಗ ಸರಕಾರದ ಉಚಿತ ಲಸಿಕೆ `ನೋ ಸ್ಟಾಕ್' ಬೋರ್ಡ್ ಹಾಕಿಕೊಂಡಿವೆ. ಸ್ಥಿತಿ ಹೀಗಿದ್ದೂ ಬಿಜೆಪಿ ಲಸಿಕೆಯನ್ನ ಪಿಆರ್ ಮೆಟೀರಿಯಲ್ ಮಾಡಿಕೊಂಡಿದ್ದು ದುರಂತ' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಮರ್ಪಕ ಲಸಿಕೆ ನೀಡಲಾಗದ ರಾಜ್ಯ ಸರಕಾರ ಪ್ರಚಾರದ ಕಸರತ್ತಿನಿಂದ ಮಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದುವರೆಗೂ ಶೇ.50ರಷ್ಟು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ 2 ಡೋಸ್ ಪೂರೈಸಿದೆ. ಇನ್ನೂ ಅವರನ್ನ ಅಪಾಯಕ್ಕೊಡ್ಡಿ ಕೆಲಸ ಮಾಡಿಸುತ್ತಿರುವ ಸರಕಾರದ ಅಬ್ಬರದ ಪ್ರಚಾರವು ಕೆಂಬೂತ ನವಿಲಿನ ಗರಿ ಸಿಕ್ಕಿಸಿಕೊಂಡು ಕುಣಿದಂತೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ