ಪಿಂಚಣಿಗಾಗಿ ಬ್ಯಾಂಕ್, ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ: ಹೈಕೋರ್ಟ್ ಗೆ ತಿಳಿಸಿದ ರಾಜ್ಯ ಸರಕಾರ
ಬೆಂಗಳೂರು, ಜೂ.30: ಪಿಂಚಣಿ ಪಡೆಯಲು ಪಿಂಚಣಿದಾರರು ಬ್ಯಾಂಕ್ ಅಥವಾ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರ ಮಾಹಿತಿ ನೀಡಿದೆ.
ರಾಜ್ಯದ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಹೆಚ್ಚಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಪಿಂಚಣಿ ನೀಡುವ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿತು.
ಅಶ್ವಿನಿ ಕುಮಾರ್ ಮತ್ತು ಕೇಂದ್ರ ಸರಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಪೀಠ ಸೂಚಿಸಿತು. ಅಶ್ವಿನಿ ಕುಮಾರ್ ಪ್ರಕರಣದಲ್ಲಿ ಎಲ್ಲ ವೃದ್ಧರಿಗೆ ನಿಯಮಿತವಾಗಿ ಪಿಂಚಣಿ ನೀಡಬೇಕು ಮತ್ತು ಗುರುತಿಸಲಾದ ವೃದ್ಧರಿಗೆ ಅಗತ್ಯ ಔಷಧ, ಮಾಸ್ಕ್, ಸ್ಯಾನಿಟೈಜರ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಆಯಾ ರಾಜ್ಯ ಸರಕಾರಗಳು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.
ಹಿರಿಯ ನಾಗರಿಕರ ಅಗತ್ಯತೆಗಳನ್ನು ಗುರುತಿಸಿ, ಆರೋಗ್ಯ ಶಿಬಿರಗಳನ್ನು ನಡೆಸಿ, ಆರೋಗ್ಯ ಮತ್ತು ಔಷಧಿಗಳು ಸುಲಭವಾಗಿ ದೊರೆಯುವಂತೆ ನೋಡಿಕೊಂಡು, ಆಹಾರ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯ ಹಕ್ಕನ್ನು ರಕ್ಷಿಸುವ ಮೂಲಕ ಅವರ ಜೀವನ ಮತ್ತು ಘನತೆಗೆ ಭದ್ರತೆ ಒದಗಿಸಬೇಕೆಂದು ಮನವಿಯಲ್ಲಿ ಕೋರಲಾಗಿತ್ತು.