×
Ad

ಅತಿವೃಷ್ಟಿಯಿಂದ ಮನೆಗೆ ಹಾನಿ: ಸಂತ್ರಸ್ತ ಕುಟುಂಬಕ್ಕೆ ಕೇವಲ 50 ಸಾವಿರ ರೂ. ಪರಿಹಾರ

Update: 2021-06-30 23:40 IST

ಚಿಕ್ಕಮಗಳೂರು, ಜೂ.30: ಜಿಲ್ಲೆಯಲ್ಲಿ ಅತೀವೃಷ್ಟಿಯಿಂದ ಮನೆ ಕಳೆದುಕೊಂಡು ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪರ್ಯಾಯ ಜಾಗ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಆರೋಪ ಇಂದಿಗೂ ಕೇಳಿ ಬರುತ್ತಿದೆ. ಸಂತ್ರಸ್ತರಿಗೆ ಪರಿಹಾರ ಧನ ನೀಡುವಲ್ಲಿ ಆಡಳಿತದ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಪರಿಹಾರ ನೀಡುತ್ತ ಬೇರೆಯವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ವಿರೋಧ ಪಕ್ಷಗಳ ಮುಖಂಡರು ಆಡಳಿತ ಪಕ್ಷದ ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತಗಳ ವಿರುದ್ಧ ಆರಂಭದಿಂದಲೂ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.

ಈ ಆರೋಪಗಳಿಗೆ ಸಾಕ್ಷಿ ಎಂಬಂತೆ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ದೇವಸ್ಥಾನವೊಂದರ ಅರ್ಚಕರ ಮನೆ ಸಂಪೂರ್ಣವಾಗಿ ಹಾನಿಯಾಗಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸಂತ್ರಸ್ತರಿಗೆ ಕೇವಲ 50 ಸಾವಿರ ರೂ. ನೀಡಲು ಮುಂದಾಗಿರುವ ಘಟನೆ ಕಳಸ ಸಮೀಪದ ಹಿರೇಬೈಲು ಗ್ರಾಮದಲ್ಲಿ ವರದಿಯಾಗಿದೆ.

ಕಳಸ ತಾಲೂಕು ವ್ಯಾಪ್ತಿಯಲ್ಲಿರುವ ಇಡಕಣಿ ಗ್ರಾಮ ಪಂಚಾಯತ್‍ಗೆ ಸೇರಿರುವ ಹಿರೇಬೈಲು ಗ್ರಾಮದಲ್ಲಿರುವ ಗಣಪತಿ ದೇವಾಲಯದ ಅರ್ಚಕ ವೆಂಕಟೇಶ್‍ಭಟ್ ಅವರ ಕುಟುಂಬ ವಾಸವಿದ್ದ ಮನೆಯು ಕಳೆದ 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಶೇ.25ರಷ್ಟು ಹಾನಿಯಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಕಳಸ ನಾಡಕಚೇರಿ ಅಜ್ಜೇಗೌಡ ಹಾಗೂ ಗ್ರಾಮ ಲೆಕ್ಕಿಗ ಕಾವನ್ ಎಂಬವರು ಮನೆ ಹಾನಿಯ ಸಮೀಕ್ಷೆ ನಡೆಸಿದ್ದರು. ಮನೆಯನ್ನು ಬಿ ಕೆಟಗರಿ ಸೇರಿಸಿ ವೆಂಕಟೇಶ್ ಅವರ ಮನೆ ಶೇ.25ರಷ್ಟು ಹಾನಿಯಾಗಿರುವ ಬಗ್ಗೆ ತಾಲೂಕು, ಜಿಲ್ಲಾಡಳಿತ ಸೇರಿದಂತೆ ಸರಕಾರಕ್ಕೆ ವರದಿ ಸಲ್ಲಿಸಿ 5 ಲಕ್ಷ ರೂ. ಪರಿಹಾರವನ್ನು ನಮೂದಿಸಿದ್ದರು. 

ಅದರಂತೆ ಅರ್ಚಕ ವೆಂಕಟೇಶ್ ಅವರಿಗೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಕಂದಾಯಾಧಿಕಾರಿಗಳು ತಿಳಿಸಿದ್ದರು. ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಿಗುವ ನಂಬಿಕೆಯಲ್ಲಿ ಅರ್ಚಕ ವೆಂಟಕೇಶ್ ಭಟ್ ಹಾನಿಗೊಳಗಾಗಿದ್ದ ತಮ್ಮ ಮನೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಿದ್ದು, ಸರಕಾರದ ಪರಿಹಾರಕ್ಕಾಗಿ ಕಾದು ಕುಳಿತಿದ್ದರು. ಸರಕಾರ ಬಿ ಕೆಟಗರಿಯ ಮನೆ ಹಾನಿಗೆ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ಆರಂಭಿಕವಾಗಿ 1 ಲಕ್ಷ ರೂ. ನೀಡುತ್ತದೆ. ಆದರೆ ವೆಂಕಟೇಶ್ ಭಟ್ ಅವರ ವಿಚಾರದಲ್ಲಿ ಸರಕಾರ ಕೇವಲ 50 ಸಾವಿರ ರೂ. ನೀಡಿದ್ದು, ಇಷ್ಟೇ ಪರಿಹಾರ ಸಿಗುವುದೆಂದು ಸ್ಥಳೀಯ ಕಂದಾಯಾಧಿಕಾರಿಗಳು ಹೇಳಿದ್ದರಿಂದ ಅರ್ಚಕ ವೆಂಕಟೇಶ್ ಭಟ್ ಕುಟುಂಬ ಸದ್ಯ ಸಂಕಷ್ಟದಲ್ಲಿದೆ.

ಅರ್ಚಕರ ಕುಟುಂಬ ಸದ್ಯ ಹಿರೇಬೈಲು ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಮನೆ ಹಾನಿಯಾದ ಕುಟುಂಬಗಳು ಬಾಡಿಗೆ ಮನೆಯಲ್ಲಿರಲು ಪ್ರತ್ಯೇಕ ಪರಿಹಾರ ಧನ 50 ಸಾವಿರ ರೂ. ನೀಡುವುದಾಗಿ ಘೋಷಿಸಿದೆ. ಆದರೆ ಅರ್ಚಕ ವೆಂಕಟೇಶ್ ಭಟ್ ಅವರಿಗೆ ಬಾಡಿಗೆ ಹಣದಲ್ಲಿ ಸರಕಾರದಿಂದ ನಯಾ ಪೈಸೆಯೂ ಇದುವರೆಗೂ ಸಿಕ್ಕಿಲ್ಲ. ಅಲ್ಲದೇ ಹೊಸ ಮನೆ ನಿರ್ಮಾಣಕ್ಕೆ ವೆಂಕಟೇಶ್ ಭಟ್ ಸರಕಾರದ ಹಣ ನಂಬಿಕೊಂಡು ಅವರಿವರ ಬಳಿ ಸಾಲ ಮಾಡಿಕೊಂಡಿದ್ದು, ಸರಕಾರ ಕೇವಲ 50 ಸಾವಿರ ರೂ. ನೀಡಿರುವುದರಿಂದ ಈ ಹಣದಲ್ಲಿ ಮನೆ ಕಟ್ಟುವುದೋ ಸಾಲ ತೀರಿಸುವುದೋ ಎಂಬ ಚಿಂತೆಗೀಡಾಗಿದ್ದಾರೆ. ದೇವಾಲಯದ ಸಮಿತಿ ನೀಡುವ 12 ಸಾವಿರ ರೂ. ವೇತನದಲ್ಲಿ ಅರ್ಚಕರ ಕುಟುಂಬ ನಡೆಸುತ್ತಿದ್ದು, ಸದ್ಯ ಈ ವೇತನದಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.

ಅರ್ಚಕ ವೆಂಕಟೇಶ್ ಅವರ ಮನೆ ಹಾನಿ ಸಮೀಕ್ಷೆ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಮನೆಯನ್ನು ಬಿ ಕೆಟಗರಿಗೆ ಸೇರಿಸಿದ್ದರು. ಆದರೀಗ ಈ ಮನೆ ಸಿ ಕೆಟಗರಿಯಲ್ಲಿದ್ದು, 50 ಸಾವಿರ ರೂ. ಮಾತ್ರ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನಲಾಗಿದೆ.

ವಿಪರ್ಯಾಸ ಎಂದರೆ ಇದೇ ಗ್ರಾಪಂ ವ್ಯಾಪ್ತಿಯ ಹಿರೇಬೈಲು ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತ ಹಾಗೂ ಕಾಫಿ ಬೆಳೆಗಾರರಾದ ಅಬೂಬಕರ್ ಎಂಬವರ ಮನೆಗೂ ಕಳೆದ ಅತಿವೃಷ್ಟಿಯಿಂದ ಹಾನಿಯಾಗಿದ್ದು, ಕಂದಾಯಾಧಿಕಾರಿಗಳು ಈ ಮನೆಗೆ ಅಲ್ಪಸ್ವಲ್ಪ ಹಾನಿಯಾಗಿದ್ದರೂ 5 ಲಕ್ಷ ರೂ. ಪರಿಹಾರ ಕೊಡಿಸಿದ್ದಾರೆ. ಅಬೂಬಕರ್ ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, 4 ಮನೆಗಳನ್ನು ಬಾಡಿಗೆಗೂ ನೀಡಿದ್ದಾರೆ. ಆದರೆ ಈ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂಬ ಕಾರಣದ ಹಿನ್ನೆಲೆಯಲ್ಲಿ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ವೆಂಕಟೇಶ್ ಭಟ್ ಅವರಿಗೆ ಕೇವಲ 50 ಲಕ್ಷ ರೂ. ನೀಡಿ ಕಂದಾಯಾಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆಂದು ಸ್ಥಳೀಯರು 'ವಾರ್ತಾಭಾರತಿ' ಬಳಿ ಆರೋಪಿಸಿದ್ದಾರೆ.

ವೆಂಕಟೇಶ್ ಭಟ್ ಅವರ ಕುಟುಂಬ ಕಳೆದ ಅತಿವೃಷ್ಟಿ ವೇಳೆ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದೆ. ಸರಕಾರ ಬಾಡಿಗೆ ಹಣ ನೀಡುವುದಾಗಿ ಹೇಳಿದ್ದರೂ ಇದುವರೆಗೆ ನಯಾಪೈಸೆ ಹಣ ನೀಡಿಲ್ಲ. ವೆಂಕಟೇಶ್ ಸರಕಾರದ ಪರಿಹಾರ ಧನ ನಂಬಿಕೊಂಡು ಇಡೀ ಮನೆಯನ್ನು ನೆಲಸಮ ಮಾಡಿ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಕಂದಾಯಾಧಿಕಾರಿಗಳು ಮಾಡಿದ ಯಡವಟ್ಟಿನಿಂದ ಅವರಿಗೆ ಕೇವಲ 50 ಸಾವಿರ ರೂ. ಮಾತ್ರ ಬಂದಿದೆ. ಕಂದಾಯಾಧಿಕಾರಿಗಳು ಈ ಮನೆಗೆ 5 ಲಕ್ಷ ರೂ. ಪರಿಹಾರಕ್ಕೆ ವರದಿ ಮಾಡಿದ್ದಾರೆ. ಆದರೆ ಈಗ ಕೇವಲ 50 ಸಾವಿರ ರೂ. ಮಾತ್ರ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರ ಮನೆಯೊಂದು ಅಲ್ಪಸ್ವಲ್ಪ ಹಾನಿಯಾಗಿದ್ದರೂ ಅವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕಂದಾಯಾಧಿಕಾರಿಗಳು ತಮ್ಮ ತಪ್ಪನ್ನು ಸರಿ ಮಾಡುವ ಮೂಲಕ ವೆಂಕಟೇಶ್ ಭಟ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು. 
- ವಿನ್‍ಸನ್, ಮರಸಣಿಗೆ ಗ್ರಾಪಂ ಸದಸ್ಯ, ಹಿರೇಬೈಲು ನಿವಾಸಿ

ಮಳೆಯಿಂದಾಗಿ ತನ್ನ ವಾಸದ ಮನೆಗೆ ಹಾನಿಯಾಗಿದ್ದು, ವಾಸಯೋಗ್ಯವಲ್ಲದ ಕಾರಣ ಪತ್ನಿ, ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಸರಕಾರ ಇದುವರೆಗೂ ಬಾಡಿಗೆ ಪರಿಹಾರದ ಹಣ ನೀಡಿಲ್ಲ. ಕಂದಾಯಾಧಿಕಾರಿಗಳು ತನ್ನ ಮನೆ ಶೇ.25ರಷ್ಟು ಹಾನಿಯಾಗಿದ್ದು, 5 ಲಕ್ಷ ರೂ. ಪರಿಹಾರಕ್ಕೆ ವರದಿ ಸಲ್ಲಿಸಿರುವುದಾಗಿ ಹೇಳಿದ್ದರು. ಸರಕಾರದ ಹಣ ನಂಬಿಕೊಂಡು ಹೊಸ ಮನೆ ನಿರ್ಮಾಣಕ್ಕೆ ಸಾಲ ಮಾಡಿದ್ದೇನೆ. ಆದರೀಗ 50 ಸಾವಿರ ರೂ. ಮಾತ್ರ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಹಣದಲ್ಲಿ ಹೊಸ ಮನೆ ನಿರ್ಮಾಣ ಸಾಧ್ಯವಿಲ್ಲ. ಏನು ಮಾಡುವುದೆಂದು ದಿಕ್ಕು ತೋಚುತ್ತಿಲ್ಲ. ಕಂದಾಯಾಧಿಕಾರಿಗಳು ತನಗೆ ಮೋಸ ಮಾಡಿದ್ದಾರೆ.
- ವೆಂಕಟೇಶ್ ಭಟ್, ಅತಿವೃಷ್ಟಿ ಸಂತ್ರಸ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News