ಕೊರೋನ ಪರಿಹಾರ ನೀಡಲು ಕಮಿಷನ್: ಹೈಕೋರ್ಟ್ ಗೆ ಕಾನೂನು ಸೇವಾ ಪ್ರಾಧಿಕಾರದ ವರದಿ
ಬೆಂಗಳೂರು, ಜೂ.30: ಕೋವಿಡ್‍ನಿಂದ ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರಕಾರ ಘೋಷಿಸಿರುವ 2 ಸಾವಿರ ರೂಪಾಯಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಬರುವ ಕಾರ್ಮಿಕರಿಂದ ಸೇವಾ ಸಿಂಧು ಕೇಂದ್ರಗಳಲ್ಲಿ ಕಮಿಷನ್ ರೂಪದಲ್ಲಿ ತಲಾ 150 ರಿಂದ 250 ರೂಪಾಯಿವರೆಗೆ ವಸೂಲು ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ(ಕೆಎಸ್‍ಎಲ್‍ಎಸ್‍ಎ) ಹೈಕೋರ್ಟ್‍ಗೆ ವರದಿ ನೀಡಿದೆ.
ಗೃಹ ಕಾರ್ಮಿಕರಿಗೂ ಕೋವಿಡ್ ಪರಿಹಾರ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕಿ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ಕೆಎಸ್‍ಎಲ್‍ಎಸ್‍ಎ ಈ ಲಿಖಿತ ಮಾಹಿತಿ ಸಲ್ಲಿಸಿದೆ.
ಕಾರ್ಮಿಕರಿಗೆ ನೆರವು ನೀಡಲು ಸರಕಾರ ಘೋಷಿಸಿರುವ ಪ್ಯಾಕೇಜ್ ಪರಿಹಾರ ಹಣ ಪಡೆದುಕೊಳ್ಳಲು ಸಮಸ್ಯೆಯಾಗುತ್ತಿರುವ ಕುರಿತು ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಕಮಿಷನ್ ಹಣಕ್ಕೆ ಬೇಡಿಕೆ ಇಡುತ್ತಿರುವ ಕುರಿತು ಕೆಎಸ್‍ಎಲ್‍ಎಸ್‍ಎಗೆ ಹಲವು ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಹಾಸನ, ರಾಮನಗರ, ಮೈಸೂರು, ಬೆಳಗಾವಿ, ಶಿವಮೊಗ್ಗ ಮತ್ತು ಬೀದರ್ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ವಿಚಾರಣೆ ನಡೆಸುವಂತೆ ಸೂಚಿಸಿದ್ದೆವು. ಆ ಪ್ರಕಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಪರಿಶೀಲಿಸಿ ವರದಿ ಸಲ್ಲಿಸಿವೆ. ಈ ವೇಳೆ ಕಾರ್ಮಿಕರಿಂದ ಕಮಿಷನ್‍ಗೆ ಬೇಡಿಕೆ ಇಟ್ಟಿರುವುದು ಕಂಡು ಬಂದಿದೆ. ಹೀಗಾಗಿ ಅಸಂಘಟಿತ ವಲಯದ ಕಾರ್ಮಿಕರು ಸರಕಾರದ ನೆರವು ಪಡೆದುಕೊಳ್ಳಲು ಕಾರ್ಮಿಕ ಇಲಾಖೆ ಅರ್ಜಿ ಸಲ್ಲಿಸುವುದಕ್ಕೆ ಸೂಕ್ತವಾದ ವ್ಯವಸ್ಥೆ ರೂಪಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿ ಪರಿಶೀಲಿಸಿದ ಪೀಠ, 2 ಸಾವಿರದಂತಹ ಸಣ್ಣ ಮೊತ್ತದ ಪರಿಹಾರ ಪಡೆಯಲು ಕಾರ್ಮಿಕರು ಈ ಪರಿ ಕಷ್ಟಪಡಬೇಕೇ. ನೋಂದಣಿ ಪ್ರಕ್ರಿಯೆಯೂ ಕ್ಲಿಷ್ಟವಾಗಿದ್ದು, ಅರ್ಹ ಫಲಾನುಭವಿ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುವ ಅಪಾಯವಿದೆ ಎಂದು ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಕಾರ್ಮಿಕ ಇಲಾಖೆಯು ಈ ಸಂಬಂಧ ಕೂಡಲೇ ಗಮನಹರಿಸಬೇಕು. ಮುಂದಿನ ವಿಚಾರಣೆ ವೇಳೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿದ್ದು ವಿವರಣೆ ನೀಡಬೇಕು ಎಂದು ನಿರ್ದೇಶಿಸಿದೆ.