ಮುಗಿಯದ ವಲಸೆ ಕಾರ್ಮಿಕರ ಸಂಕಟಗಳು

Update: 2021-07-01 06:40 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶಾದ್ಯಂತ ಆತ್ಮಹತ್ಯೆಯ ಸರಣಿಗಳು ಆರಂಭವಾಗಿವೆ. ಸಿನೆಮಾ, ಟಿವಿಗಳ ಸೆಲೆಬ್ರಿಟಿಗಳಂತೆ ಈ ಆತ್ಮಹತ್ಯೆಗಳು ಸುದ್ದಿಯಾಗುತ್ತಿಲ್ಲವಷ್ಟೇ. ಒಬ್ಬ ಸೆಲೆಬ್ರಿಟಿ ಆತ್ಮಹತ್ಯೆ ಮಾಡಿಕೊಂಡರೆ ಅದರ ಆರ್ಥಿಕ, ಸಾಮಾಜಿಕ ಹಿನ್ನೆಲೆ, ಮುನ್ನೆಲೆಗಳನ್ನಿಟ್ಟು ಒಂದು ವಾರವಾದರೂ ಚರ್ಚೆಗಳು ನಡೆಯುತ್ತವೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ರೈತರು ಆತ್ಮಹತ್ಯೆ ಮಾಡಿಕೊಂಡರೆ ‘ಸಾಲ’ ‘ಜೀವನದಲ್ಲಿ ಜಿಗುಪ್ಸೆ’ ಎಂಬಿತ್ಯಾದಿ ಪದಗಳಲ್ಲಿ ಮುಗಿದು ಹೋಗುತ್ತದೆ. ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಸರಕಾರದ ದತ್ತಾಂಶಗಳ ಮೂಲಕವೇ ಬೆಳಕಿಗೆ ಬರುತ್ತಿವೆ. ವಿಪರ್ಯಾಸವೆಂದರೆ ಈ ಹಿಂದೆ ಕೇವಲ ಕುಟುಂಬದ ಹಿರಿಯನಷ್ಟೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಕೊರೋನ ದಿನಗಳಲ್ಲಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗುತ್ತಿದೆೆ. ಎಳೆಯ ಮಕ್ಕಳನ್ನು ಕೊಂದು ಪಾಲಕರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಹೀಗೆ ಆತ್ಮಹತ್ಯೆಗೈಯುತ್ತಿರುವ ಬಹುತೇಕ ಜನರು ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದಾರೆ.

ಈ ಹಿಂದೆ ವೆಂಟಿಲೇಟರ್, ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಯಲ್ಲಿ ಸಾಲು ಸಾಲಾಗಿ ಜನರು ಸಾಯುತ್ತಿರುವಾಗ ಅವುಗಳನ್ನು ವರ್ಣರಂಜಿತವಾಗಿ ವರದಿ ಮಾಡುತ್ತಿದ್ದ ಮಾಧ್ಯಮಗಳು ಈ ಸಾಲು ಆತ್ಮಹತ್ಯೆಗಳ ಬಗ್ಗೆ ಕುರುಡಾಗಿವೆ. ಈ ಆತ್ಮಹತ್ಯೆಗಳಿಗೂ ಕೊರೋನಕ್ಕೂ ಇರುವ ಸಂಬಂಧವನ್ನು ಗುರುತಿಸುವುದಕ್ಕೆ ಮಾಧ್ಯಮಗಳು ವಿಫಲವಾಗಿವೆ. ವಲಸೆ ಕಾರ್ಮಿಕರು ಎದುರಿಸುತ್ತಿರುವ ಹಸಿವಿನ ಕುರಿತಂತೆ ಸುಪ್ರೀಂಕೋರ್ಟ್ ಕಣ್ಣು ತೆರೆದಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ದೇಶದ ಯಾವುದೇ ಭಾಗದಲ್ಲಿ ಉಚಿತವಾಗಿ ಪಡಿತರ ಪಡೆಯಲು ಸಾಧ್ಯವಾಗುವ ‘ಒಂದು ದೇಶ, ಒಂದು ಪಡಿತರ’ ಯೋಜನೆಯನ್ನು ಜುಲೈ 31ರೊಳಗೆ ಜಾರಿಗೊಳಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ‘‘ಪಡಿತರ ಯೋಜನೆಗೆ ನೋಂದಾಯಿಸಿಕೊಳ್ಳಲು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಅಸಂಘಟಿತ ವಲಯದ ಕಾರ್ಮಿಕರು ಸುದೀರ್ಘ ಅವಧಿಯಿಂದ ಕಾಯುತ್ತಿರುವಾಗ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ಲಕ್ಷ, ಅಸಡ್ಡೆ ಮತ್ತು ನಿರಾಸಕ್ತಿ ಅಕ್ಷಮ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೇ ಸುಪ್ರೀಂಕೋರ್ಟ್ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಿಗೆ ಉಪಕ್ರಮವನ್ನು ಸಿದ್ಧಪಡಿಸಲು 2018ರಲ್ಲೇ ಸೂಚನೆ ನೀಡಿತ್ತು. ಕನಿಷ್ಠ 2020ರಲ್ಲಿ ಕೊರೋನದಿಂದ ಬಾಧಿತರಾಗಿ ವಲಸೆ ಕಾರ್ಮಿಕರು ಬೀದಿ ಪಾಲಾದಾಗಲಾದರೂ ಸರಕಾರ ಎಚ್ಚರಗೊಳ್ಳಬೇಕಾಗಿತ್ತು.

ವಿಪರ್ಯಾಸವೆಂದರೆ ಸರಕಾರದ ನಿರ್ಲಕ್ಷದ ಹಿಂದೆ ಸುಪ್ರೀಂಕೋರ್ಟ್ ಪಾತ್ರವೂ ಇದೆ. 2020ರಲ್ಲಿ ಸರಕಾರದ ಪೂರ್ವ ಸಿದ್ಧತೆಯಿಲ್ಲದ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಭೀಕರ ನೋವು, ನಷ್ಟಗಳಿಗೆ ಈಡಾದಾಗ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಕೇಂದ್ರ ಸರಕಾರಕ್ಕೆ ಮಾರ್ಗದರ್ಶನ ನೀಡಿದ್ದಿದ್ದರೆ 2021ರಲ್ಲಿ ಸರಕಾರಕ್ಕೆ ಮತ್ತೊಮ್ಮೆ ಛೀಮಾರಿ ಹಾಕುವ ಅಗತ್ಯ ಬರುತ್ತಿರಲಿಲ್ಲ. 2020ರಲ್ಲಿ ವಲಸೆ ಕಾರ್ಮಿಕರ ಪರವಾಗಿ ಈ ದೇಶದ ಸಾಮಾಜಿಕ ಹೋರಾಟಗಾರರು ಸುಪ್ರೀಂಕೋರ್ಟ್‌ನ ಮೆಟ್ಟಿಲು ಹತ್ತಿದಾಗ, ಕೇಂದ್ರದ ವೈಫಲ್ಯವನ್ನು ಗುರುತಿಸಲು ಸರ್ವೋಚ್ಚ ನ್ಯಾಯಾಲಯ ವಿಫಲವಾಯಿತು. ವಲಸೆ ಕಾರ್ಮಿಕರಿಗಾದ ಅನ್ಯಾಯಕ್ಕೆ ಸ್ಪಂದಿಸಲು, ಕೇಂದ್ರ ಸರಕಾರಕ್ಕೆ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಆದುದರಿಂದ ಕೊರೋನ ದಿನಗಳಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಇನ್ನಷ್ಟು ದಯನೀಯವಾಗುವಲ್ಲಿ ತನ್ನ ಪಾತ್ರವೆಷ್ಟು ಎನ್ನುವುದನ್ನು ಸುಪ್ರೀಂಕೋರ್ಟ್ ಕೂಡ ಆತ್ಮ ವಿಮರ್ಶೆ ನಡೆಸಬೇಕಾಗಿದೆ.

ದೇಶದ ಪಾಲಿಗೆ ಕೊರೋನ ಸಮಸ್ಯೆಯಾಗಿದ್ದರೆ, ವಲಸೆ ಕಾರ್ಮಿಕರ ಪಾಲಿಗೆ ಇಂದಿಗೂ ಲಾಕ್‌ಡೌನ್ ಅತಿ ದೊಡ್ಡ ಸಮಸ್ಯೆಯಾಗಿದೆ. ಕೊರೋನದಿಂದ ಸಂತ್ರಸ್ತರಾಗಿರುವ ವಲಸೆ ಕಾರ್ಮಿಕರಿಗಿಂತ, ಲಾಕ್‌ಡೌನ್‌ನಿಂದ ಸಂತ್ರಸ್ತರಾಗಿರುವ ಕಾರ್ಮಿಕರೇ ಅಧಿಕ. ಇಂದಿಗೂ ವಲಸೆ ಕಾರ್ಮಿಕರು ಸರಕಾರದ ಬಳಿ ಕೇಳುತ್ತಿರುವುದು ಲಸಿಕೆಯನ್ನಲ್ಲ, ದುಡಿಮೆಯನ್ನು. ಅವರೇನು ತಮಗೆ ಪುಕ್ಕಟೆ ಅಕ್ಕಿ ಕೊಡಿ, ಬೇಳೆ ಕೊಡಿ ಎಂದು ಕೇಳುತ್ತಿಲ್ಲ. ನಮ್ಮನ್ನು ದುಡಿಯಲು ಬಿಡಿ ಎಂದಷ್ಟೇ ಮನವಿ ಮಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಕೆಲವೇ ಗಂಟೆಗಳ ಕಾಲ ಲಾಕ್‌ಡೌನ್ ಸಡಿಲಿಕೆಗಳನ್ನು ಮಾಡಲಾಗುತ್ತಿದೆ. ಅಂಗಡಿಗಳಲ್ಲಿ ಬೇಕಾದ ದಿನಸಿಗಳನ್ನು ಕೊಂಡುಕೊಳ್ಳುವುದಕ್ಕೆ ಈ ಸಡಿಲಿಕೆ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ದಿನಗೂಲಿ ಕಾರ್ಮಿಕರ ಬಳಿ ದುಡಿಮೆಯೇ ಇಲ್ಲದ ಮೇಲೆ, ಅವರು ಅಂಗಡಿಗಳಿಂದ ದಿನಸಿಗಳನ್ನು ಕೊಂಡುಕೊಳ್ಳುವುದಾದರೂ ಹೇಗೆ? ‘ಒಂದು ದೇಶ, ಒಂದು ಪಡಿತರ’ ಯೋಜನೆಯು ಸಂಘಟಿತ ಕಾರ್ಮಿಕರನ್ನೇ ತಲುಪದೇ ಇದ್ದಾಗ, ಅಸಂಘಟಿತ ಕಾರ್ಮಿಕರನ್ನು ಪರಿಣಾಮಕಾರಿಯಾಗಿ ತಲುಪುವ ಬಗೆ ಹೇಗೆ? ಹಲವೆಡೆ ಆಧಾರ್ ಕಾರ್ಡ್ ಇಲ್ಲ ಎನ್ನುವ ಒಂದೇ ಕಾರಣಕ್ಕೆ ಬಡ ಕುಟುಂಬಗಳಿಗೆ ಪಡಿತರ ನಿಲ್ಲಿಸಿದ ಪ್ರಕರಣಗಳು ವರದಿಯಾಗಿವೆ.

ರೇಷನ್ ಸಿಗದೆ ಹಸಿವಿನಿಂದ ಸತ್ತು ಹೋದ ಘಟನೆಗಳು ನಡೆದಿವೆ. ಇತ್ತೀಚೆಗೆ ಕುಟುಂಬವೊಂದು ಹಸಿವಿನಿಂದ ತೀರಾ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಹಸಿವನ್ನು ಸಹಿಸಲಾರದೆ ಕುಟುಂಬ ಸಮೇತ ಆತ್ಮಹತ್ಯೆ ನಡೆಯುತ್ತಿರುವ ಘಟನೆಗಳಿಗೆ ಲೆಕ್ಕವೇ ಇಲ್ಲ. ಇಂತಹ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ದುಡಿಮೆಗೆ ಅವಕಾಶ ಮಾಡಿಕೊಡುವುದೇ ಅತಿ ದೊಡ್ಡ ಪರಿಹಾರ. ಭಾರತದಂತಹ ದೇಶ, ಕೊರೋನವನ್ನು ತಾಳಿಕೊಳ್ಳಬಹುದು, ಆದರೆ ಲಾಕ್‌ಡೌನ್ ತಾಳಿಕೊಳ್ಳಲಾರದು. ಈ ನಿಟ್ಟಿನಲ್ಲಿ, ಕೊರೋನಕ್ಕೆ ಲಾಕ್‌ಡೌನ್ ಪರಿಹಾರ ಎನ್ನುವ ನಂಬಿಕೆಯಿಂದ ಸರಕಾರ ಮೊದಲು ಹೊರಬರಬೇಕಾಗಿದೆ. ಜಾಗೃತಿಯ ಮೂಲಕ ಮತ್ತು ಆರೋಗ್ಯ ವಲಯಕ್ಕೆ ಸೂಕ್ತ ಸೌಕರ್ಯಗಳನ್ನು ಒದಗಿಸುವ ಮೂಲಕ ಕೊರೋನವನ್ನು ಎದುರಿಸುವುದಕ್ಕೆ ಸರಕಾರ ಮುಂದಾಗಬೇಕು.

ವಲಸೆ ಕಾರ್ಮಿಕ ಸ್ಥಿತಿ ನ್ಯಾಯಾಲಯ ಊಹಿಸಿದ್ದಕ್ಕಿಂತಲೂ ಭೀಕರವಾಗಿದೆ. ಲಾಕ್‌ಡೌನ್ ದಿನಗಳಿಂದ ಈ ವರ್ಗದಲ್ಲಿ ಆತ್ಮಹತ್ಯೆಗಳು ಹೆಚ್ಚಿವೆ ಮಾತ್ರವಲ್ಲ, ಅತಿ ಕಡಿಮೆ ವೇತನಕ್ಕೆ ಭೂಮಾಲಕರು ಇವರನ್ನು ಶೋಷಿಸಲಾರಂಭಿಸಿದ್ದಾರೆ. ಅಸಂಘಟಿತ ಕೂಲಿಕಾರ್ಮಿಕರ ಮಕ್ಕಳು ಶಿಕ್ಷಣದಿಂದ ಸಂಪೂರ್ಣ ವಿಮುಖರಾಗಿದ್ದಾರೆ. ನಗರದಿಂದ ಹಳ್ಳಿಗೆ ಮರಳಿದವರನ್ನು ಜಾತಿ ಪದ್ಧತಿ ಇನ್ನಷ್ಟು ಭೀಕರವಾಗಿ ಕಾಡುತ್ತಿದೆ. ಅತ್ತ ಹಳ್ಳಿಯಲ್ಲೂ ಇರಲಾರದೆ, ನಗರದಲ್ಲೂ ಉಳಿಯಲಾಗದೆ ವಲಸೆ ಕಾರ್ಮಿಕರು ಅತಂತ್ರರಾಗಿದ್ದಾರೆ. ಎಲ್ಲಿಯವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆಯೋ ಅಲ್ಲಿಯವರೆಗೆ ಈ ಅತಂತ್ರತೆಯಿಂದ ವಲಸೆ ಕಾರ್ಮಿಕರಿಗೆ ಮುಕ್ತಿಯಿಲ್ಲ. ಇದೇ ಸಂದರ್ಭದಲ್ಲಿ, ನಗರ ಪ್ರದೇಶದ ಮಧ್ಯಮ, ಮೇಲ್‌ಮಧ್ಯಮ ವರ್ಗಕ್ಕೆ ಸುಲಭವಾಗಿ ಲಸಿಕೆಗಳು ದೊರಕಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ದೊರಕುತ್ತಿಲ್ಲ. ವಲಸೆ ಕಾರ್ಮಿಕರಿಗಂತೂ ಲಸಿಕೆ ದೂರದ ಮಾತು. ನಗರದಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ ಪ್ರಯಾಣ ಬೆಳೆಸುವ, ತಳಸ್ತರದಲ್ಲಿ ಅತಿ ಹೆಚ್ಚು ಜನರೊಂದಿಗೆ ಬೆರೆಯುವ ವಲಸೆ ಕಾರ್ಮಿಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವುದೂ ಸರಕಾರದ ಕರ್ತವ್ಯವಾಗಿದೆ. ಕೊರೋನಾ ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ತಡೆಯುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿಯೂ ನ್ಯಾಯಾಲಯದಿಂದ ಸರಕಾರವನ್ನು ಎಚ್ಚರಿಸುವ ಕೆಲಸ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News