ಚುನಾವಣೆಯಿಂದ ದಬ್ಬಾಳಿಕೆ ಅಂತ್ಯವಾಗುತ್ತದೆ ಎಂಬ ಖಾತರಿಯಿಲ್ಲ: ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

Update: 2021-07-01 06:06 GMT
 ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

ಹೊಸದಿಲ್ಲಿ: ಪ್ರತಿ ಕೆಲ ವರ್ಷಗಳಿಗೊಮ್ಮೆ 'ಆಡಳಿತಗಾರ'ರನ್ನು ಬದಲಾಯಿಸುವ ಹಕ್ಕನ್ನು ನಾಗರಿಕರು ಹೊಂದಿದ ಮಾತ್ರಕ್ಕೆ ಅದು "ದಬ್ಬಾಳಿಕೆ''ಯನ್ನು ಅಂತ್ಯಗೊಳಿಸುತ್ತದೆ ಎಂಬ ಖಾತ್ರಿಯಲ್ಲ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.

"ಇಲ್ಲಿಯ ತನಕ ನಡೆದ 17 ಸಾರ್ವತ್ರಿಕ ಚುನಾವಣೆಗಳಲ್ಲಿ  ಜನರು ಆಡಳಿತ ಪಕ್ಷವನ್ನು ಅಥವಾ ಮೈತ್ರಿಕೂಟಗಳನ್ನು ಎಂಟು ಬಾರಿ ಬದಲಾಯಿಸಿದ್ದಾರೆ, ಇದು ಒಟ್ಟು ಚುನಾವಣೆಗಳ ಶೇ50ರಷ್ಟಾಗುತ್ತದೆ. ದೇಶದಲ್ಲಿರುವ ವ್ಯಾಪಕ ಅಸಮಾನತೆ, ಅನಕ್ಷರತೆ, ಹಿಂದುಳಿಯುವಿಕೆ, ಬಡತನ, ಅಜ್ಞಾನದ ಹೊರತಾಗಿಯೂ ಸ್ವತಂತ್ರ ಭಾರತದ ಜನರು ತಾವು ಬುದ್ಧಿವಂತರೆಂದು ಸಾಭೀತುಗೊಳಿಸಿದ್ದಾರೆ. ಜನರು ತಮ್ಮ ಕರ್ತವ್ಯಗಳನ್ನು ಸಾಕಷ್ಟು ಚೆನ್ನಾಗಿ ನಿಭಾಯಿಸಿದ್ದಾರೆ. ಇದೀಗ ಆಡಳಿತವನ್ನು ನಿರ್ವಹಿಸುವವರು ತಾವು ಸಂವಿಧಾನದತ್ತವಾಗಿ ತಮಗೆ ದೊರೆತ ಅಧಿಕಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆಯೇ ಎಂಬುದನ್ನು ಅವಲೋಕಿಸುವ ಸಮಯವಾಗಿದೆ,'' ಎಂದು ಅವರು ಹೇಳಿದ್ದಾರೆ.

ಹದಿನೇಳನೇ ಜಸ್ಟಿಸ್ ಪಿ ಡಿ ದೇಸಾಯಿ ಸ್ಮಾರಕ ಭಾಷಣ ನೀಡುವ ವೇಳೆ ಮುಖ್ಯನ್ಯಾಯಮೂರ್ತಿಗಳು ಮೇಲಿನ ಮಾತುಗಳನ್ನು ಹೇಳಿದ್ದಾರೆ.

"ಸರಕಾರದ ಅಧಿಕಾರ ಮತ್ತು ಕ್ರಮಗಳನ್ನು ನಿಯಂತ್ರಿಸಲು ನ್ಯಾಯಾಂಗಕ್ಕೆ "ಸಂಪೂರ್ಣ ಸ್ವಾತಂತ್ರ್ಯ''ದ ಅಗತ್ಯವಿದೆ. ನ್ಯಾಯಾಂಗವನ್ನು ಶಾಸಕಾಂಗ ಅಥವಾ ಕಾರ್ಯಾಂಗ ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸಲು ಸಾಧ್ಯವಿಲ್ಲ, ಇಲ್ಲದೇ ಹೋದಲ್ಲಿ ಕಾನೂನು ಎಂಬುದು ಕೇವಲ ಕಾಲ್ಪನಿಕವಾಗಬಹುದು,'' ಎಂದು ಅವರು ಹೇಳಿದರು.

"ಈ ಸಾಂಕ್ರಾಮಿಕದ ಸಂದರ್ಭ ಈ ನೆಲದ ಕಾನೂನು ಇಲ್ಲಿನ ಸಾಮಾನ್ಯರನ್ನು ರಕ್ಷಿಸಲು ಎಷ್ಟರ ಮಟ್ಟಿಗೆ ಬಳಸಲಾಗಿದೆ ಎಂಬುದರ ಕುರಿತು ಯೋಚಿಸಿ ಪ್ರಶ್ನಿಸುವ ಸಮಯ ಇದಾಗಿದೆ,'' ಎಂದು ಅವರು ಹೇಳಿದ್ದಾರೆ.

"ಮುಂದಿನ ದಶಕಗಳಲ್ಲಿ ಎದುರಾಗಬಹುದಾದ ದೊಡ್ಡ ಸಮಸ್ಯೆಗೆ ಇದೊಂದು  ಆರಂಭವಷ್ಟೇ ಆಗಿರಬಹುದು. ಆದುದರಿಂದ ನಾವೆಲ್ಲಿ ಸರಿಯಾದ ಹೆಜ್ಜೆ ಇರಿಸಿದ್ದೇವೆ, ಏನು ತಪ್ಪು ಮಾಡಿದ್ದೇವೆ ಎಂದು ಪರಾಮರ್ಶಿಸುವುದನ್ನು ನಾವು ಆರಂಭಿಸಬೇಕು,'' ಎಂದು ಅವರು ಹೇಳಿದರು.

"ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುವ ಸಾಮರ್ಥ್ಯ ಹೊಂದಿರುವ ಹೊಸ ಮಾದ್ಯಮ ಸಾಧನಗಳು ಸರಿ ಮತ್ತು ತಪ್ಪು, ಒಳ್ಳೆಯದು ಮತ್ತು ಕೆಟ್ಟದು ಹಾಗೂ ನಿಜ ಮತ್ತು ನಕಲಿ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಅಸಮರ್ಥವಾಗಿವೆ. ಆದುದರಿಂದ ಪ್ರಕರಣಗಳನ್ನು ನಿರ್ಧರಿಸುವಲ್ಲಿ ಮಾದ್ಯಮ ವಿಚಾರಣೆ ಮಾರ್ಗದರ್ಶಿಯಾಗಲು ಸಾಧ್ಯವಿಲ್ಲ,'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News