ನಟ ಜಗ್ಗೇಶ್ ಪುತ್ರ ಯತಿರಾಜ್ ಸಂಚರಿಸುತ್ತಿದ್ದ ಕಾರು ಅಪಘಾತ
ಚಿಕ್ಕಬಳ್ಳಾಪುರ, ಜು.7: ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಸಂಚರಿಸುತ್ತಿದ್ದ ಕಾರು ನಗರದ ಹೊರವಲಯದ ಅಗಲಗುರ್ಕಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಯತಿರಾಜ್ ಅಪಾಯದಿಂದ ಪಾರಾಗಿದ್ದಾರೆ.
ಯತಿರಾಜ್ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಕಾರು ಅಗಲಗುರ್ಕಿಯ ಬಳಿ ಸಂಚರಿಸುತ್ತಿದ್ದಾಗ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ನಂತರ ಮರಕ್ಕೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಯತಿರಾಜ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
''ಕೊರೋನ ಬಂದಾಗಿನಿಂದ ಹೊರ ಹೋಗಿಲ್ಲ, ಹೋಗಿ ಬರುವೆ ಎಂದು ಅಮ್ಮನಿಗೆ ಹೇಳಿ ಮಗ ಯತಿರಾಜ ಹೊರ ಹೋಗಿದ್ದ. ರಸ್ತೆಯಲ್ಲಿ ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದಿದೆ. ನಿಮ್ಮ ಶುಭಹಾರೈಕೆಯಿಂದ ಯತಿರಾಜನಿಗೆ ಸಣ್ಣ ಗಾಯವೂ ಆಗಿಲ್ಲ'' ಎಂದು ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.