ಮೂಢನಂಬಿಕೆಯಿಂದ ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ: ಸಿದ್ದರಾಮಯ್ಯ ಆರೋಪ
ಮೈಸೂರು, ಜು.1: ಚಾಮರಾಜನಗರದಲ್ಲಿ ಅಷ್ಟೊಂದು ದೊಡ್ಡ ಆಕ್ಸಿಜನ್ ದುರಂತ ನಡೆದು 36 ಮಂದಿ ಸಾವನ್ನಪ್ಪಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲ್ಲಿಗೆ ಭೇಟಿ ನೀಡದೆ ಮೂಢ ನಂಬಿಕೆಗೆ ಜೋತು ಬಿದ್ದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದಲ್ಲಿ ನಡೆದ ದೊಡ್ಡ ಆಕ್ಸಿಜನ್ ದುರಂತದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇದೂವರೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಮರಾಜನಗರಕ್ಕೆ ಹೋಗಿಲ್ಲ, ಅಲ್ಲಿನ ಜನರ ಪರಿಸ್ಥಿತಿಯನ್ನು ಅವಲೋಕಿಸಿಲ್ಲ, ಮೂಢ ನಂಬಿಕೆಗೆ ಜೋತು ಬಿದ್ದು ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡಲ್ಲ ಎಂದು ಕಿಡಿಕಾರಿದರು.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ 12 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದೆ. ಐದು ವರ್ಷಗಳ ಕಾಲ ಸಂಪೂರ್ಣ ಆಡಳಿತ ನಡೆಸಿದ್ದೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೆದರಿ ಚಾಮರಾಜನಗರಕ್ಕೆ ಹೋಗಿಲ್ಲ, ಮೊದಲು ಚಾಮರಾಜನಗರಕ್ಕೆ ತೆರಳಿ ಅಲ್ಲಿನ ಜನರ ಕಷ್ಟ ಕೇಳಬೇಕು, ದುರಂತದಲ್ಲಿ ಸಾವಿಗೀಡಾದವರಿಗೆ ಪರಿಹಾರ ನೀಡಬೇಕು. ಅಲ್ಲಿನ ಜನರ ಸಮಸ್ಯೆಯನ್ನು ಖುದ್ದು ಆಲಿಸಬೇಕು ಎಂದು ಆಗ್ರಹಿಸಿದರು.
ಕೊರೋನದಿಂದ ಮೃತಪಟ್ಟವರಿಗೆ ಐದು ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಮೂರು ಪತ್ರ ಬರೆದಿದ್ದೇನೆ. ಸುಪ್ರೀಂ ಕೋರ್ಟ್ ಕೂಡ ಪರಿಹಾರ ನೀಡುವಂತೆ ಹೇಳಿದೆ. ಇದರ ಬಗ್ಗೆ ಚರ್ಚೆ ಮಾಡೋಣ ಎಂದರೆ ಅಧಿವೇಶನವನ್ನೇ ಕರೆಯುತ್ತಿಲ್ಲ. ಅಧಿವೇಶನ ಕರೆದರೆ ಇವರ ನಿಜವಾದ ಬಣ್ಣ ಬಯಲಾಗುತ್ತದೆ ಎಂಬ ಭಯ ಅವರಲ್ಲಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕೋವಿಡ್ ಲಸಿಕೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಇದ್ದರೆ ಜನ ಕ್ಯೂನಲ್ಲಿ ಏಕೆ ನಿಲ್ಲುತ್ತಿದ್ದರು. ದಾಸ್ತಾನಿದೆ ಎಂದ ಸಚಿವ ಸುಧಾಕರ್ ಗೆ ಜನ ಶಾಪ ಹಾಕುತ್ತಿದ್ದಾರೆ ಎಂದರು.
ಪಿಯುಸಿ ಪರೀಕ್ಷೆ ಬೇಡ ಎಂದ ಮೇಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡುವುದರಲ್ಲಿ ಅರ್ಥ ಏನಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಡ ಎಂದು ನಾನು ಮೊದಲಿನಿಂದಲೂ ಹೇಳಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದರು.