×
Ad

ವಕ್ಫ್ ಹಣ ದುರ್ಬಳಕೆ ಆರೋಪ: ಶಾಫಿ ಸಅದಿ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ

Update: 2021-07-01 19:04 IST

ಬೆಂಗಳೂರು, ಜೂ.1: ಅಧಿಕಾರ ದುರ್ಬಳಕೆ ಮಾಡಿಕೊಂಡು ದುರುದ್ದೇಶದಿಂದ ವಕ್ಫ್ ಮಂಡಳಿಯಿಂದ ಹಣ ಮಂಜೂರು ಮಾಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಎಮ್. ಶಾಫಿ ಸಅದಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ನಿಲುವು ತಿಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಈ ವಿಚಾರವಾಗಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹಾಗೂ ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಯಾಝ್ ಅಹ್ಮದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಸೂಚನೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಕರ್ನಾಟಕ ವಕ್ಫ್ ಕಾಯ್ದೆ-1995ರ ಸೆಕ್ಷನ್ 20 (1) (ಬಿ) ಪ್ರಕಾರ `ವಕ್ಫ್ ಮಂಡಳಿ ಸದಸ್ಯರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದರೆ, ನಿರ್ಲಕ್ಷ್ಯ ತೋರಿದರೆ ಮತ್ತು ವಕ್ಫ್ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡರೆ ಅಂತಹವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಸದಸ್ಯ ಸ್ಥಾನದಿಂದ ವಜಾಗೊಳಿಸುವ ಅವಕಾಶವಿದೆ. ಅದರಂತೆ ಕ್ರಮ ಕೈಗೊಳ್ಳುವ ಬಗ್ಗೆ ನಿಲುವು ತಿಳಿಸಲು ಸರಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿತು.

ರಾಜ್ಯ ವಕ್ಫ್ ಮಂಡಳಿಯ ಹಾಲಿ ಸದಸ್ಯರಾಗಿರುವ ಶಾಫಿ ಸಅದಿ ಅವರು ಸಅದಿಯಾ ಎಜುಕೇಷನಲ್ ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಈ ಫೌಂಡೇಷನ್‌ಗೆ ಒಳಪಟ್ಟಿರುವ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಅದಿಯಾ ಮಸೀದಿಯ ಕಾಂಪೌಂಡ್ ನಿರ್ಮಾಣಕ್ಕೆ ವಕ್ಫ್ ಮಂಡಳಿಯಿಂದ 15 ಲಕ್ಷ ರೂ. ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

'ಈಗಾಗಲೇ ಮಸೀದಿಗೆ ಕಾಂಪೌಂಡ್ ಇದ್ದರೂ, ಸುಳ್ಳು ದಾಖಲೆಗಳನ್ನು ಸಲ್ಲಿಸಿ ಹಣ ಮಂಜೂರು ಮಾಡಿಸಿಕೊಳ್ಳುವ ಮೂಲಕ ಶಾಫಿ ಸಅದಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ವಕ್ಫ್ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಶಾಫಿ ಸಅದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News