×
Ad

ನೈತಿಕ ಜವಾಬ್ದಾರಿ ಮರೆತು ವೈಯಕ್ತಿಕ ದಾಳಿ ನಡೆಸುತ್ತಿರುವ ಪಬ್ಲಿಕ್ ಟಿವಿ: ನಟ ರಕ್ಷಿತ್ ಶೆಟ್ಟಿ ಆಕ್ರೋಶ

Update: 2021-07-01 19:17 IST
Photo: Facebook.com/therakshitshetty

ಬೆಂಗಳೂರು: ''ನಿಮ್ಮ ಬಳಿ ಇರುವ ಅಸ್ತ್ರ ಟಿಆರ್ ಪಿಗೋಸ್ಕರ ನಡೆಸುತ್ತಿರುವ ಒಂದು ನ್ಯೂಸ್ ಚಾನೆಲ್. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ ಎಂದು ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಪಬ್ಲಿಕ್ ಟಿವಿ ವಿರುದ್ಧ ಕಿಡಿಕಾರಿದ್ದಾರೆ.

ಬುಧವಾರ ರಕ್ಷಿತ್ ಶೆಟ್ಟಿ ಬಗ್ಗೆ ''ಯಾಕಿಂಗೆ ಇವರೆಲ್ಲ?'' ಎಂಬ ಟೈಟಲ್ ಬಳಸಿ ವರದಿ ಪ್ರಸಾರ ಮಾಡಿದ್ದ ಪಬ್ಲಿಕ್ ಟಿವಿ, ರಕ್ಷಿತ್ ಶೆಟ್ಟಿ ಅವರನ್ನು 'ಸ್ವಯಂಘೋಷಿತ ಸಿಂಪಲ್ ಸ್ಟಾರ್' ಎಂದು ಕರೆದಿತ್ತು. 'ಅವನೇ ಶ್ರೀಮನ್ನಾರಾಯಣ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕೆಂದು ಒದ್ದಾಡುತ್ತಿದ್ದ ಈತ ಪಾನ್ ಬೀಡ ಶಾಪ್ ಸ್ಟಾರ್ ಕೂಡ ಆಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಸಿನಿಮಾ ನಿರ್ಮಾಪಕನಿಗೆ ಆಕಾಶ ತೋರಿಸಿಯೇ ಬಿಟ್ಟ. ಅಸಲಿಗೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಮತ್ತು ರಕ್ಷಿತ್ ಶೆಟ್ಟಿ ಸಂಬಂಧ ಹೇಗಿದೆ ? ಇಬ್ಬರೂ ಸಿನಿಮಾ ವ್ಯವಹಾರ ಕಡಿದುಕೊಂಡಿದ್ದೇಕೆ ? ರಕ್ಷಿತ್ ಶೆಟ್ಟಿ ನಾಯಿ ಬಾಲ ಹಿಡಿದುಕೊಂಡಿದ್ದೇಕೆ'' ಎಂದು ಪ್ರಶ್ನೆ ಮಾಡಿತ್ತು.

ಈ ಬಗ್ಗೆ ಫೇಸ್‌ಬುಕ್ ನಲ್ಲಿ ಬರೆದುಕೊಂಡಿರುವ ಅವರು, ''ನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲಾ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇಕಡ 90ರಷ್ಟು ಜನ ಇಂದಿಗೂ ನನ್ನ ಜೊತೆಯಲ್ಲೇ ಇರುವರು. ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ. ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೇನೆ ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೇನೆ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್ ಆಫಿಸರ್ ರಿಂದ ಹಿಡಿದು, ಟೆಕ್ನಿಶಿಯನ್ಸ್, ಡೈರೆಕ್ಟರ್ಸ್ ಹಾಗೂ ಪ್ರತಿಯೊಬ್ಬ ಪ್ರೊಡ್ಯುಸರ್ ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲೂ ಮಾತನಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ'' ಎಂದು ತಿಳಿಸಿದ್ದಾರೆ.

''ಹಾಗಂತ ನಿಜ ಸುಳ್ಳಾಗಲ್ಲ! ಪಬ್ಲಿಕ್ ಟಿವಿಯವರು ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾನು ಎಲ್ಲಾ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎಂಬ ನಂಬಿಕೆ ಇತ್ತು. ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು, ಮಾಧ್ಯಮದ ನೈತಿಕ ಜವಾಬ್ದಾರಿಗಳನ್ನು ಮರೆತು, ವೈಯುಕ್ತಿಕ ದಾಳಿ ನಡೆಸಿ, ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ, ಆದರೆ ಹತ್ತು ದಿನಗಳ ಬಳಿಕ. ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು, ಯಾವ ಯಾವ ಸತ್ಯ ಹೊರಗೆ ಬರುತ್ತದೋ, ಅವರವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೊಡುತ್ತೇನೆ. ನನ್ನ ಉತ್ತರ July 11ರಂದು, ಕಾದು ನೋಡಿ, Truth is mighty and must prevail. ನನ್ನ ಎಲ್ಲಾ ಏಳು ಬೀಳುಗಳಲ್ಲಿ ನನ್ನ ಜೊತೆಗಿದ್ದ ನನ್ನ ಆತ್ಮೀಯರಿಗೂ, ಹಿತೈಷಿಗಳಿಗೂ, ಅಭಿಮಾನಿ ಬಳಗಕ್ಕೂ'' ಎಂದು ರಕ್ಷಿತ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News