ಡಾ. ಎಂ. ಮೋಹನ್ ಆಳ್ವ ಅವರಿಗೆ ನಾಲ್ವಡಿ ದತ್ತಿ ಪ್ರಶಸ್ತಿ ಪ್ರದಾನ

Update: 2021-07-01 14:45 GMT

ಬೆಂಗಳೂರು, ಜು. 1: 2021ನೇ ಸಾಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಯನ್ನು ಪ್ರಸಿದ್ಧ ಸಂಸ್ಕೃತಿ ಚಿಂತಕ ಡಾ.ಎಂ.ಮೋಹನ್ ಆಳ್ವ ಅವರಿಗೆ ಇಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರದಾನ ಮಾಡಲಾಯಿತು.

ದತ್ತಿ ಪುರಸ್ಕಾರವನ್ನು ಪ್ರದಾನ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್, ಮಾತಿನಿಂದ ಅಲ್ಲದೆ ಕೃತಿಯಿಂದ ನಾಡಿಗೆ ಪರಿಚಯವಾದ ಮೂಡುಬಿದರೆಯ ಆಳ್ವಾಸ್ ಫೌಂಡೇಶ್‍ನ ಅಧ್ಯಕ್ಷ ಮೋಹನ್ ಆಳ್ವ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಡಾ. ಆಳ್ವ ಅವರು ಶಿಕ್ಷಣ, ಸಂಸ್ಕೃತಿ, ಸಾಹಿತ್ಯ, ಕೃಷಿ, ಉದ್ದಿಮೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಈ ನಾಡು ಕಂಡ ಅತ್ಯಂತ ದಕ್ಷ ಹಾಗೂ ಕ್ರಿಯಾಶೀಲ ವ್ಯಕ್ತಿ ಎಂದರು.

ದತ್ತಿ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಮೋಹನ್ ಆಳ್ವ ಅವರು 'ಪ್ರಶಸ್ತಿ ನನ್ನನ್ನು ವಿನೀತನನ್ನಾಗಿ ಮಾಡಿದೆ' ಎಂದರು. ನಾಲ್ವಡಿಯವರು ಸಮರ್ಥ ಆಡಳಿತಗಾರರು, ಈ ನಾಡಿನ ಅಭಿವೃದ್ಧಿಯ ಚಹರೆಯನ್ನೇ ಬದಲಿಸಿದವರು. ಅವರನ್ನು ರಾಜರ್ಷಿ ಎಂದಷ್ಟೇ ಅಲ್ಲ, ಬ್ರಹ್ಮರ್ಷಿ ಎಂದು ಕರೆದರೂ ತಪ್ಪಿಲ್ಲ ಎಂದರು.

ಈ ಸಮಾರಂಭದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮರಾಜ ದಂಡಾವತಿ, ಕೆ.ರಾಜಕುಮಾರ್ ಹಾಗೂ ಗೌರವ ಕೋಶಾಧ್ಯಕ್ಷರಾದ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News