ಆಗಸ್ಟ್ 22ರಂದು ಶಿಕ್ಷಕರ ಅರ್ಹತಾ ಪರೀಕ್ಷೆ: ಸಚಿವ ಸುರೇಶ್ ಕುಮಾರ್

Update: 2021-07-01 14:18 GMT

ಬೆಂಗಳೂರು, ಜು.1: ಒಂದರಿಂದ ಎಂಟನೇ ತರಗತಿಗಳ ಶಾಲಾ ಶಿಕ್ಷಕರ ನೇಮಕಾತಿ ಅರ್ಹತೆ ಪಡೆಯಲು ಅಗತ್ಯವಾದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಆ.22ರಂದು ಜರುಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

1 ರಿಂದ 5ನೆ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿಇಡಿ, ಉತ್ತೀರ್ಣರಾಗಿರಬೇಕು. 6ರಿಂದ 8ನೆ ತರಗತಿ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಡಿಇಡಿ ಅಥವಾ ಪದವಿಯೊಂದಿಗೆ ಬಿಇಡಿ ಅಥವಾ ಬಿಎಇಡಿ, ಬಿಎಸ್‍ಸಿಇಡಿಯಲ್ಲಿ ಉತ್ತೀರ್ಣರಾಗಿರಬೇಕು. ಕೊನೆ ವರ್ಷಗಳ ಡಿಇಡಿ, ಬಿಇಡಿ, ಬಿಎಇಡಿ, ಬಿಎಸ್ಸಿಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್-ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು ಜು.20 ಕೊನೆಯ ದಿನವಾಗಿದೆ. ಆ. 22ರಂದು ಬೆಳಗ್ಗೆ 9.30ರಿಂದ 12 ಗಂಟೆ ಮತ್ತು ಮಧ್ಯಾಹ್ನ 2 ಗಂಟೆಯಿಂದ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ.

ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತವೆ. ಪ್ರವೇಶ ಪತ್ರಗಳನ್ನು ದಿನಾಂಕ ಆ. 12ರಿಂದ ಆನ್‍ಲೈನ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ. ಹೆಚ್ಚಿನ ಸಂಖ್ಯೆಯ ಅರ್ಹ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News