ಗ್ರಾ.ಪಂ. ಗುತ್ತಿಗೆ ನೌಕರ ಕೊರೋನದಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ: ಸಚಿವ ಈಶ್ವರಪ್ಪ

Update: 2021-07-01 14:42 GMT

ಬೆಂಗಳೂರು, ಜು. 1: `ರಾಜ್ಯದಲ್ಲಿನ ಗ್ರಾಮ ಪಂಚಾಯತ್ ಮಟ್ಟದ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದಿಲ್ಲ. ಒಂದು ವೇಳೆ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರೆ ಅವರ ಕುಟುಂಬದ ಸದಸ್ಯರಿಗೆ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಕ್ರಮದಲ್ಲಿ ಯೋಜನೆಗಳಲ್ಲಿ ಸಾಧಿಸಿರುವ ಪ್ರಗತಿ, ಸ್ವಚ್ಛ ಭಾರತ್ ಅಭಿಯಾನಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ, ಕಾರ್ಯತಂತ್ರ ಮಾದರಿಗಳ ಉಪ ವಿಧಿಗಳು ಮತ್ತು ಸ್ವಚ್ಛ ಸಂಕೀರ್ಣ ಸ್ವಚ್ಛತೆಯ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, `ಈಗಾಗಲೇ ಖಾಯಂ ಆಗಿರುವ, ಆಗದಿರುವ ನೌಕರರಿಗೂ ಈ ಕೋವಿಡ್ ಪರಿಹಾರ ಸಿಗಲಿದ್ದು, 186 ಮೃತ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್, ಗ್ರಾಮ ಮಟ್ಟದ ಕಾರ್ಯಪಡೆಯಲ್ಲದೆ 50 ಮನೆಗಳಿಗೆ ಒಂದು ಸಮಿತಿ ರಚನೆ ಮಾಡಿದ್ದನ್ನು ಕೇಂದ್ರ ಸರಕಾರ ಅಭಿನಂದಿಸಿದೆ' ಎಂದರು.

ಜಲಜೀವನ್ ಮಿಷನ್‍ನಡಿ ಶುದ್ಧ ಕುಡಿಯುವ ನೀರಿನ 7 ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದ ಅವರು, ಉದ್ಯೋಗ ಖಾತ್ರಿಯಡಿ 13 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, ಈಗಾಗಲೇ 4.40 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 9,10,000 ಕಾಮಗಾರಿಗಳು ಪ್ರಾರಂಭವಾಗಿವೆ. ಜಲಜೀವನ್ ಮಿಷನ್‍ನಡಿಯಲ್ಲಿ ಪ್ರತಿಯೊಂದು ಮನೆಗೂ ನಳದ ಸಂಪರ್ಕ ನೀಡಲಾಗುತ್ತಿದೆ. ಪ್ರತಿದಿನ ತಲಾ 55 ಲೀಟರ್ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಪೈಪ್‍ಲೈನ್ ಹಾಕಲಾಗಿದ್ದರೂ ಕೆಲವು ಮನೆಗಳಿಗೆ ನಳದ ಸಂಪರ್ಕ ವಿರಲಿಲ್ಲ. ಈ ಕಾಮಗಾರಿ ಮುಂದುವರೆಯಲಿದೆ ಎಂದು ತಿಳಿಸಿದರು.

`ನಳ್ಳಿ ನೀರಿನ ಸಂಪರ್ಕಕ್ಕೆ ಯಾವುದೇ ದರವನ್ನು ನಿಗದಿ ಮಾಡಿಲ್ಲ. ಆದರೆ, ಗ್ರಾಮ ಪಂಚಾಯತ್ ಗಳೇ ನೀರಿನ ದರ ನಿಗದಿ ಮಾಡಲಿದೆ. ಪ್ರತಿ ತಿಂಗಳಿಗೆ 100ರೂ.ನಿಗದಿಯಾಗಿದ್ದರೂ ಕೆಲವೆಡೆ ಆ ದರವನ್ನು ನೀಡಲಾಗುತ್ತಿಲ್ಲ ಎಂದ ಅವರು, ಗ್ರಾಮೀಣ ಭಾಗದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಒತ್ತು ಕೊಟ್ಟಿದ್ದು, ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ. 1,800 ಗ್ರಾ.ಪಂ.ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಕೆಲಸ ಮುಗಿಯುತ್ತಿದ್ದು, ಕೆಲವೆಡೆ ತ್ಯಾಜ್ಯ ವಿಲೇವಾರಿಗೆ ಸ್ಥಳ ಸಿಗುತ್ತಿಲ್ಲ. 22 ಲಕ್ಷ ನರೇಗಾ ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಜಾಬ್‍ಕಾರ್ಡ್ ಹೊಂದಿರುವ ಖಾತೆಗಳಿಗೆ ನೇರವಾಗಿ ನರೇಗಾ ಕಾಮಗಾರಿಯ ಹಣ ಸಂದಾಯವಾಗಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಫೌಂಢೇಶ್‍ನ ಸಂಚಾಲಕ ಸಂತೋಷ್ ನಾಯಕ್ ಮತ್ತು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಚ್.ಬೋರಯ್ಯ, ಪ್ರಧಾನ ಕಾರ್ಯದರ್ಶೀ ರಾಜೇಶ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಕಳದ ಜಾಗೃತಿ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಎಲ್ಲ 6,090 ಗ್ರಾ.ಪಂ.ಗಳಲ್ಲಿ 'ವನಮೋಹತ್ಸವ' ಆಚರಣೆ ಮಾಡಿ ಪರಿಸರದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಪರಿಸರ ಜಾಗೃತಿ ಕೆಲಸ ಶ್ಲಾಘನೀಯವಾದದ್ದು, ಇದರಲ್ಲಿ ಅತ್ಯಂತ ಪ್ರಮುಖವಾದ ವಿಚಾರವೆಂದರೆ ಆ ಸಸಿಗಳ ನಿರ್ವಹಣೆಯನ್ನು ಅವರೇ ಖುದ್ದಾಗಿ ಮಾಡಲು ಮುಂದೆ ಬಂದಿರುವುದು ಅಪರೂಪದಲ್ಲಿ ಅಪರೂಪವಾದದ್ದು ಅವರೆಲ್ಲರಿಗೂ ಒಳ್ಳೆಯದಾಗಲಿ'

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News