ಗೋಶಾಲೆಗಳಿಗೆ ಸಹಾಯ ಧನ ಹೆಚ್ಚಿಸಲು ಪರಿಶೀಲನೆ: ಸಚಿವ ಪ್ರಭು ಚೌಹಾಣ್

Update: 2021-07-01 16:03 GMT

ಬೆಂಗಳೂರು, ಜು. 1: `ರಾಜ್ಯದಲ್ಲಿ ಸದ್ಯ ಪ್ರತಿಗೋವಿಗೆ ದಿನಕ್ಕೆ 17.50 ರೂ.ಸಹಾಯಧನ ನೀಡಲಾಗುತ್ತಿದೆ. ಆದರೆ ಗೋ ಶಾಲೆಗಳ ನಿರ್ವಹಣ ವೆಚ್ಚ ಹೆಚ್ಚಿರುವುದರಿಂದ ನಿಭಾಯಿಸುವುದು ಕಷ್ಟವಾಗುತ್ತಿದ್ದು, ಸಹಾಯಧನ ಹೆಚ್ಚಿಸಬೇಕೆಂದು ಗೋಶಾಲೆಗಳ ಪ್ರತಿನಿಧಿಗಳು ಮನವಿ ಮಾಡಿದ್ದರು. ಈ ಬಗ್ಗೆ ಪರಿಶೀಲಿಸಲಾಗುವುದು' ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭರವಸೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ರಾಜ್ಯದಲ್ಲಿನ ಗೋಶಾಲೆಗಳ ವ್ಯವಸ್ಥೆ ಮತ್ತು ಗೋಸಂರಕ್ಷಣೆ ಚಟುವಟಿಕೆಗಳ ಬಗ್ಗೆ ಗೋಶಾಲೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಅವರು, `ಗೋವುಗಳ ಆರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಲು ಸೂಚಿಸಿದರು. ರಾಜ್ಯದಲ್ಲಿ 188 ಗೋಶಾಲೆಗಳಿದ್ದು 49 ಸಾವಿರಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಕೆಲವು ಗೋಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದು ಜಿಲ್ಲಾ ಪ್ರವಾಸದ ವೇಳೆ ಗಮನಿಸಿದ್ದೇನೆ. ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ಸಂರಕ್ಷಣೆಯಲ್ಲಿ ಎಲ್ಲ ಗೋಶಾಲೆಗಳು ಕೈಜೋಡಿಸಿರುವುದು ಸಂತಸದ ವಿಷಯ' ಎಂದರು.

ರಿಯಾಯಿತಿ ದರದಲ್ಲಿ ವಿದ್ಯುತ್: ರಾಜ್ಯದಲ್ಲಿ ನಡೆಯುತ್ತಿರುವ 188 ಗೋಶಾಲೆಗಳು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ತಿಂಗಳಿಗೆ ಸಾವಿರಾರು ರೂ.ವಿದ್ಯುತ್ ಬಿಲ್ ಬರುತ್ತಿದೆ. ಆದ್ದರಿಂದ ರಿಯಾಯತಿ ದರದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಗೋಶಾಲೆಗಳ ಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದಾರೆ. ಗೋವುಗಳ ಆರೋಗ್ಯ ಕಾಪಾಡುವುದು ಹೆಚ್ಚು ಸವಾಲಾಗಿದೆ. ಇಲಾಖೆಯಿಂದ 15ದಿನಕ್ಕೆ 2 ಬಾರಿಯಾದರು ಪಶುವೈದ್ಯರು ಗೋಶಾಲೆಗಳಿಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು ಎಂದು ಗೋಶಾಲೆಗಳ ಪ್ರತಿನಿಧಿಗಳು ಕೋರಿದರು.

`ಮೇವು ಕತ್ತರಿಸುವ ಯಂತ್ರವನ್ನು ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡುವ ವ್ಯವಸ್ಥೆ ಮಾಡಲು ಈ ಸಂದರ್ಭದಲ್ಲಿ ಪ್ರತಿನಿಧಿಗಳು ಕೇಳಿಕೊಂಡರು. ಅಲ್ಲದೆ, ಗೋವುಗಳ ಉತ್ಪನ್ನಗಳಿಗೆ ಮಾರುಕಟ್ಟೆ ರಾಜ್ಯದಲ್ಲಿ ಇಲ್ಲದಿರುವುದರಿಂದ ಮಾರಾಟದ ಸಮಸ್ಯೆ ಇದೆ. ಗೋ ಅರ್ಕ, ಸಗಣಿ, ಅಗರಬತ್ತಿ ಸೇರಿದಂತೆ 20ಕ್ಕೂ ಹೆಚ್ಚು ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಲು ಸಚಿವರಿಗೆ ಮನವಿ ಮಾಡಿದರು. ಕೆಎಂಎಫ್ ಮಳಿಗೆಗಳಲ್ಲಿ ದೇಸಿ ಗೋ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿ ವ್ಯವಸ್ಥೆ ಮಾಡಲು ಗೋಶಾಲೆಗಳ ಪ್ರತಿನಿಧಿಗಳು ಕೇಳಿಕೊಂಡರು.

ಎಸ್‍ಪಿಸಿಎ ಸಭೆ: ಜಿಲ್ಲೆಗಳಲ್ಲಿ ನಿಯಮಿತವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಸಂಘದ ಸಭೆಗಳು ನಡೆಯುತ್ತಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರದಲ್ಲಿ ಎಸ್.ಪಿ.ಸಿ.ಎ ಜವಾಬ್ದಾರಿ ಹೆಚ್ಚಾಗಿದೆ. ಆದರೆ ಜಿಲ್ಲೆಯಲ್ಲಿ ಸಭೆ ನಡೆಸಲು ಜಿಲ್ಲಾಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಇದರಿಂದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ನಿಟ್ಟಿನಲ್ಲಿ ಹಿನ್ನಡೆ ಆಗುತ್ತಿದೆ ಎಂದು ಹೇಳಿದರು.

`ಇದೇ ಮೊದಲ ಬಾರಿಗೆ ಖಾಸಗಿ ಗೋಶಾಲೆಗಳ ಪ್ರತಿನಿಧಿಗಳ ಸಭೆ ನಡೆಸಲಾಗಿದ್ದು, ಗೋಶಾಲೆಗಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಬೇಕಾದ ಕ್ರಮಗಳು ಹಾಗೂ ಖಾಸಗಿ ಗೋಶಾಲೆಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಗೋಹತ್ಯೆ ನಿಷೇಧ ಜಾರಿಯಾದ ನಂತರ ಸಂರಕ್ಷಿಸಿದ ಗೋವುಗಳನ್ನು ಖಾಸಗಿ ಗೋಶಾಲೆಗಳು ಹೆಚ್ಚು ಮುತುವರ್ಜಿ ವಹಿಸಿರುವುದರಿಂದ ಖಾಸಗಿ ಗೋಶಾಲೆಗಳ ಜವಾಬ್ದಾರಿ ಹೆಚ್ಚಾಗಿದೆ. ಇನ್ನು ಮುಂದೆ ಪ್ರತಿ 2 ತಿಂಗಳಿಗೊಮ್ಮೆ ಗೋಶಾಲೆಗಳ ಪ್ರತಿನಿಧಿಗಳ ಸಭೆ ನಡೆಸಲಾಗುವುದು'

-ಪ್ರಭು ಚೌಹಾಣ್, ಪಶುಸಂಗೋಪನಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News