ಬಿಜೆಪಿ ,ಜೆಡಿಎಸ್ ಪಕ್ಷ ಬಡವರ ಪರ ಇರುವ ಪಕ್ಷ ಅಲ್ಲ : ಸಿದ್ದರಾಮಯ್ಯ

Update: 2021-07-01 16:12 GMT

ಮಂಡ್ಯ, ಜು.1: ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಬಡವರ ಪರ ಇರುವ ಪಕ್ಷ ಅಲ್ಲ. ಕಾಂಗ್ರೆಸ್ ಪಕ್ಷ ಬಡವರು ಹಾಗೂ ಎಲ್ಲಾ ಜಾತಿ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಮನುಷ್ಯರಾಗಿ ನೋಡುವ ಪಕ್ಷ ಕಾಂಗ್ರೆಸ್  ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ 5ನೇ ವಾರ್ಡಿನ ಶಂಕರಮಠದಲ್ಲಿ ನಗರಸಭಾ ಸದಸ್ಯ ನಯೀಮ್ ಅವರು ಏರ್ಪಡಿಸಿದ್ದ ಆಹಾರ ಕಿಟ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡವರಪರ ಸರಕಾರ ಬರಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ಕೊರೋನ ಎರಡನೇ ಅಲೆಯಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು ಬಹಳ ಕಷ್ಟ ಅನುಭವಿಸಿದರು. ಅಂದೇ ಸಂಪಾದನೆ ಮಾಡಿ ಜೀವನ ನಡೆಸುವವರ ಬದುಕು ಕಷ್ಟಕರವಾಗಿತ್ತು. ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುವುದು ಮಾನವೀಯತೆ ಕೆಲಸ ಎಂದರು.

 ನಾನು ಅಧಿಕಾರದಲ್ಲಿ ಇದ್ದಿದ್ದರೆ ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಸಾವಿರ ಹಾಗೂ 10 ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಯಲ್ಲಿ ಇದು ಸಾಧ್ಯವಾಗಲಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ 2023ರಲ್ಲಿ ನಾವು ಅಧಿಕಾರಕ್ಕೆ ಬಂದರೆ ಮತ್ತೆ 7ಕೆಜಿ ಕೊಡುತ್ತೇನೆ  ಎಂದು ಅವರು ಮನವಿ ಮಾಡಿದರು.

 ಬಿಜೆಪಿ ಸರಕಾರ  ಕೊರೋನ ಸಾವಿನಲ್ಲೂ ಸುಳ್ಳು ಹೇಳಿ ರಾಜಕೀಯ ಮಾಡುತ್ತಿದ್ದು, ದೇಶದ ಹಣಕಾಸಿನ ಪರಿಸ್ಥಿತಿ ಅಧೋಗತಿ ತಲುಪಿದ್ದು, ಪೆಟ್ರೋಲ್, ಡೀಸೆಲ್  ದರ ಹೆಚ್ಚಳ, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ  ಜನಸಾಮಾನ್ಯರ ಬದುಕು ಕಷ್ಟಕರವಾಗಿದೆಯೆಂದು ಟೀಕಿಸಿದರು.

ಆಪರೇಷನ್ ಪ್ರಚಲಿತ ಆಗಿದ್ದು ಯಡಿಯೂರಪ್ಪ ಕಾಲದಲ್ಲಿ. ಶಾಸಕರನ್ನು ಆಪರೇಷನ್ ಮೂಲಕ  ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ  ಸರಕಾರ ಕೊರೋನ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಮಾಜಿ ಸಚಿವರಾದ ಎನ್. ಚೆಲುವರಾಯಸ್ವಾಮಿ, ಎಂ.ಎಸ್..ಆತ್ಮಾನಂದ, ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಮುಖಂಡರಾದ ಗಣಿಗ ರವಿ ಕುಮಾರ್, ದಡದಪುರ ಶಿವಣ್ಣ, ಸಿದ್ಧಾರೂಢ ಸತೀಶ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾ ಅಧ್ಯಕ್ಷೆ ಅಂಜನ, ನಗರಸಭಾ ಸದಸ್ಯ ನಯೀಮ್, ಮುಡಾ ಮಾಜಿ ಅಧ್ಯಕ್ಷ  ಮುನಾವರ್ ಖಾನ್, ಕೆಪಿಸಿಸಿ ವೀಕ್ಷಕ ಸಂಪಂಗಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ  ವಿಜಯ್ ಕುಮಾರ್, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News