ಮೈತ್ರಿ ಸರಕಾರ ಪತನಕ್ಕೆ ಕಾರಣರಾದ 17 ಮಂದಿಯೇ ನನ್ನ ಜೀವ ಉಳಿಸಿದ ಪುಣ್ಯಾತ್ಮರು: ಕುಮಾರಸ್ವಾಮಿ

Update: 2021-07-01 16:24 GMT

ಬೆಂಗಳೂರು, ಜು.1: ನನ್ನ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕಾರಣರಾದ 17 ಮಂದಿಯೇ ನನ್ನ ಜೀವ ಉಳಿಸಿದ ಪುಣ್ಯಾತ್ಮರು. ಹೀಗಾಗಿ ನನಗೆ ಅವರ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ದೇವರೇ ನನ್ನ ಜೀವ ಉಳಿಸಲು ಅಧಿಕಾರದಿಂದ ಕೆಳಗೆ ಇಳಿಸಿದ್ದಾನೆ. ನಾನು ಕಾಂಗ್ರೆಸ್‍ನಿಂದಾಗಿ ಅಧಿಕಾರ ಕಳೆದುಕೊಳ್ಳಲಿಲ್ಲ. ಬದಲಿಗೆ ದೇವರು ನನಗೆ ಒಳ್ಳೆಯದನ್ನು ಮಾಡಲು ಕೆಳಗೆ ಇಳಿಸಿದ್ದಾನೆ. ತುಂಬಾ ಸಂತೋಷದಿಂದಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದೆ' ಎಂದು ಹೇಳಿದರು.

ಸಿದ್ದು ವಿರುದ್ಧ ವಾಗ್ದಾಳಿ: `ಕಾಂಗ್ರೆಸ್ ಪಕ್ಷದಲ್ಲಿ ಇದೀಗ 10 ಮಂದಿ ಮುಖ್ಯಮಂತ್ರಿ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಹಿಂದೆ 2018ರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಆದರೆ, ಇದೀಗ ಅವರು ಮುಖ್ಯಮಂತ್ರಿಯಾಗಲು ಮುಂದಾಗಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಆದರೆ, ಅವರು ಈಗಲೇ ಸಿಎಂ ಕನಸು ಕಾಣುತ್ತಿದ್ದಾರೆ' ಎಂದು ಸಿದ್ದರಾಮಯ್ಯರ ಹೆಸರು ಉಲ್ಲೇಖಿಸದೆ ಲೇವಡಿ ಮಾಡಿದರು.

ಜನ ಪಾಠ ಕಲಿಸಲಿದ್ದಾರೆ: `ಇನ್ನೂ ಎರಡು ವರ್ಷ ನಾನೇ ಸಿಎಂ, ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಈ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಇದನ್ನು ಮೊದಲು ನಿಲ್ಲಿಸಬೇಕು. ನಿಮ್ಮ ಭ್ರಷ್ಟಾಚಾರಕ್ಕೆ ಈ ಬಾರಿ ಜನ ನಿಮಗೆ ಪಾಠ ಕಲಿಸಲಿದ್ದಾರೆ' ಎಂದು ಕುಮಾರಸ್ವಾಮಿ ಟೀಕಿಸಿದರು.

ಹಾವೇರಿ ಜಿಲ್ಲೆಯಲ್ಲಿ ಜೆಡಿಎಸ್‍ಗೆ ಶಕ್ತಿ ಇರಲಿಲ್ಲ. ಇದೀಗ ಉತ್ತರ ಕರ್ನಾಟಕ ಜೆಡಿಎಸ್‍ಗೆ ಹೆಬ್ಬಾಗಿಲು ಆಗಲಿದೆ. ನಯಾಜ್ ಶೇಖ್ ಅವರೇ ಹಾನಗಲ್ ಕ್ಷೇತ್ರದ ನಮ್ಮ ಅಭ್ಯರ್ಥಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ. ಇದನ್ನು ಮುಸ್ಲಿಮ್ ಬಂಧುಗಳು ತಿಳಿದುಕೊಳ್ಳಬೇಕು. 2006ರಲ್ಲಿ ಜೆಡಿಎಸ್ ಅನ್ನು ಮುಗಿಸಲು ಕಾಂಗ್ರೆಸ್ ಹೊರಟಿತ್ತು. ಆಗ ನಾವು ಎಚ್ಚೆತ್ತುಕೊಂಡಿದ್ದೆವು. ಪಕ್ಷವನ್ನ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಜೊತೆ ಹೋಗಬೇಕಾಯಿತು. ಆದರೂ ನಮ್ಮ ತತ್ವ, ಸಿದ್ಧಾಂತವನ್ನು ಬಿಟ್ಟುಕೊಡಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸೂತಕದ ಮನೆಯಲ್ಲಿ ರಾಜಕೀಯ ಮಾಡಬಾರದೆಂದು ಸುಮ್ಮನೆ ಇದ್ದೆ. ಈಗ ನಮ್ಮ ಆಟ ಪ್ರಾರಂಭಿಸುತ್ತೇವೆ

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News