×
Ad

ಶಾಲೆ ಕೆಡವಿ ಸ್ಮಾರಕ ನಿರ್ಮಿಸಿದರೆ ನಮ್ಮ ಹೆಣಗಳ ಮೇಲೆ ಕಾಲಿಡಬೇಕು: ಹಿರಿಯ ಸಮಾಜವಾದಿ ಪ.ಮಲ್ಲೇಶ್

Update: 2021-07-01 22:46 IST

ಮೈಸೂರು,ಜು.1: ಯಾರು ಹೋರಾಟಕ್ಕೆ ಬರುತ್ತಾರೋ ಆಗ ಜಯ ಸಿದ್ಧ. ಕೆಲವೇ ದಿನಗಳಲ್ಲಿ ಇಲ್ಲಿ ಶಾಲೆ ಉಳಿಯುತ್ತೆ ಎಂಬ ನಿರ್ಧಾರವನ್ನು ಸಂಬಂಧಪಟ್ಟವರು ಅನಿವಾರ್ಯವಾಗಿ ತೆಗೆದುಕೊಳ್ಳುತ್ತಾರೆ. ಆ ಭರವಸೆ ಕಾಣಿಸುತ್ತಿದೆ ಎಂದು ಹಿರಿಯ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್ ಹೇಳಿದರು.

ಎನ್ ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟ ವತಿಯಿಂದ ಇಂದೂ ಕೂಡ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅವರೇನಾದರೂ ಈ ಹೋರಾಟವನ್ನು ಪರಿಗಣಿಸದೆ, ಕಾನೂನಿದೆ, ಕೋರ್ಟ್ ನನಗೆ ಆರ್ಡರ್ ಕೊಟ್ಟಿದೆ. ಈ ಎಲ್ಲಾ ಮಾತುಗಳಿಂದ ಇಲ್ಲೇನಾದರೂ ಕಾಲಿಟ್ಟರೆ ನಾವು ನಿಮಗೆ ಭರವಸೆ ಕೊಡುತ್ತೇವೆ. ನಮ್ಮ ಹೆಣಗಳ ಮೇಲೆ ಅವರು ಇಲ್ಲಿ ಕಾಲಿಡಬೇಕು. ಸುಮ್ಮನೆ ಕಾಲಿಡಲು ಸಾಧ್ಯವಿಲ್ಲ. ಅಂತಹ ಹೋರಾಟವನ್ನು ನಾವಿಲ್ಲಿ ವ್ಯವಸ್ಥಿತವಾಗಿ, ಅನಿವಾರ್ಯವಾಗಿ ಏರ್ಪಡಿಸಬೇಕು. ಹೋರಾಟ ಬೇರೆ ರೂಪ ತಾಳುತ್ತಿದೆ. ಇಡೀ ಮೈಸೂರು ನಗರ 2013ರಲ್ಲಿ ಪ್ರಾರಂಭ ಮಾಡಿದಾಗಲೂ ಇಡೀ ಮೈಸೂರು ನಗರ ಈ ಸಮಸ್ಯೆಯ ಪರವಾಗಿದೆ. ಹೆಣ್ಣುಮಕ್ಕಳ ಶಾಲೆಯನ್ನು ಒಡೆದು ವಿವೇಕಾನಂದರ ಸ್ಮಾರಕ ಕಟ್ಟುವುದು ಯಾಕೆ? ಶಾಲೆ ಯಾಕೆ ಒಡೆಯಬೇಕು? ಮಕ್ಕಳೆಲ್ಲಿ ಹೋಗಬೇಕು ಎನ್ನುವಂತಹ ಅಭಿಪ್ರಾಯವನ್ನು ಇಡೀ ಮೈಸೂರು ನಗರ ಇವತ್ತು ಮತ್ತೊಮ್ಮೆ ಮತ್ತೊಮ್ಮೆ ಪ್ರತಿರೋಧಿಸುತ್ತಿದೆ ಎಂದರು.

ಸರ್ಕಾರ ಮಾಡುತ್ತಿರುವುದು ತಪ್ಪು, ಮಠದವರು ಮಾಡುತ್ತಿರುವುದು ತಪ್ಪು, ಎಂಬ ಭಾವನೆ ಮೈಸೂರು ನಗರಕ್ಕಿದೆ. ಆದ್ದರಿಂದ ಗೆಲುವು ನಮ್ಮದೆ, ಈ ಹೋರಾಟ ಗೆಲ್ಲಲಿದೆ. ಮೈಸೂರು ನಗರದಲ್ಲಿ ಎಲ್ಲಿ ಹೋದರೂ ದೊಡ್ಡ ದೊಡ್ಡ ವೃತ್ತಗಳೆಲ್ಲ ಇವರದ್ದೇ, ವಿವೇಕಾನಂದ ವೃತ್ತ, ರಾಮಕೃಷ್ಣ ಪರಮಹಂಸ ವೃತ್ತ, ಶಾರದಾ ದೇವಿ ವೃತ್ತ ಎಲ್ಲಿ ಹೋದರೂ ಇವರೆ ಇರೋದು, ಇವರೆಲ್ಲ ಮೈಸೂರಿಗೆ ಬಂದು ಏನು ಮಾಡಿದರು? ಸ್ವಾಮಿವಿವೇಕಾನಂದರು, ರಾಮಕೃಷ್ಣಪರಮಹಂಸರ ಮೇಲೆ ನಮಗೆ ಗೌರವವಿದೆ ಇಟ್ಟುಕೊಳ್ಳಲಿ, ನಾವದನ್ನು ವಿರೋಧ ಮಾಡಿಲ್ಲ. ಈ ಹೆಸರು ಹಾಕಿಸಿಕೊಳ್ಳುವುದನ್ನು ಬಿಟ್ಟರೆ ಶಿಕ್ಷಣ ಕ್ಕಾಗಲಿ, ಬಡವರ ಬಗ್ಗೆಯಾಗಲಿ ಏನಾದರೂ ಒಂದೇ ಒಂದು ಕಾರ್ಯಕ್ರಮವನ್ನು ಮಾಡಿದ್ದಾರಾ? ವ್ಯವಸ್ಥಿತವಾಗಿ ಆಶ್ರಮ ಕಟ್ಟಿಕೊಂಡು ವ್ಯವಹಾರ ನಡೆಸುತ್ತಿರುವರಿಗೆ ಶಾಲೆ ಕೊಡುತ್ತಾರೆಂದರೆ ಸರ್ಕಾರಕ್ಕೆ ನಾಚಿಕೆ ಇದೆಯಾ? ತಗೊಳ್ಳುವವರಿಗೆ ನಾಚಿಕೆ ಇದೆಯಾ? ನಾವು ಬಾಯಿ ಬಿಡದಿದ್ದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ ಹೀಗೆಯೇ ಇರುತ್ತೇವೆ. ಬೇಡಿಕೊಳ್ಳುವ ಜೀವನ ಇದೊಂದು ಜೀವನನಾ? ಬದುಕಿನ ಹಕ್ಕು ಚಲಾಯಿಸುವ ಕೆಲಸವಾಗಬೇಕು. ಯಾರ್ಯಾರ ಕೈಗೋ ಸರ್ಕಾರ ಕೊಟ್ಟು ಅವರ ಮುಂದೆ ಕೈಕಟ್ಟಿ ನಿಂತು ಬೇಡುವ ಸ್ಥಿತಿಯಲ್ಲಿದ್ದೇವೆ. ಕನ್ನಡ ಹೆಣ್ಣು ಮಕ್ಕಳ ಶಾಲೆಯನ್ನು ಉಳಿಸಿಕೊಳ್ಳುವುದು ನಮ್ಮ ಹಕ್ಕು ಎಂದರು.

ಪ್ರತಿಭಟನೆಯಲ್ಲಿ ಸಾಹಿತಿ ಜಿ.ಪಿ.ಬಸವರಾಜು, ನಾ.ದಿವಾಕರ, ಮಾಜಿ ಮೇಯರ್ ಪುರುಷೋತ್ತಮ್, ದಸಂಸ ಮಖಂಡ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಕಲ್ಲಹಳ್ಳಿ ಕುಮಾರ್, ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಪರಿಸರ ಹೋರಾಟಗಾರ್ತಿ ಬಾನು ಮೋಹನ್, ಶಂಭಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News