×
Ad

ಮಾಲಿನ್ಯ ತಡೆಗಟ್ಟಲು ನಿಯಮ ಉಲ್ಲಂಘಿಸುವ ಕೈಗಾರಿಕೆ, ಆಸ್ಪತ್ರೆಗಳು, ಕ್ರಶರ್ ಗಳ ವಿರುದ್ಧ ಕ್ರಮ: ಸಚಿವ ಯೋಗೇಶ್ವರ್

Update: 2021-07-01 23:00 IST

ಬೆಂಗಳೂರು, ಜು. 1: `ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸದಿರುವ ಕೈಗಾರಿಕೆಗಳು, ಆಸ್ಪತ್ರೆಗಳು, ಕಲ್ಲು ಕ್ರಶರ್ ಗಳು, ಔಷಧಿ ತಯಾರಿಕಾ ಕಂಪೆನಿಗಳ ತಪಾಸಣೆ ಅಭಿಯಾನ ಆರಂಭಿಸುವುದು' ಎಂದು ಪರಿಸರ ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ತುರ್ತುಸ್ಪಂದನಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, `ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆಯಲ್ಲಿರುವ ವಿವಿಧ ರೀತಿಯ ಕೈಗಾರಿಕೆಗಳು ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೆ ನದಿ-ಕೆರೆ ಸೇರಿದಂತೆ ಜಲಮೂಲಗಳಿಗೆ ನೇರವಾಗಿ ತ್ಯಾಜ್ಯವನ್ನು ಬಿಡುತ್ತಿರುವುದು ಹಾಗೂ ಖಾಲಿ ಜಮೀನುಗಳಿಗೆ ತುಂಬುತ್ತಿರುವುದರ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಮುಂದಿನ ವಾರದಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡುತ್ತೇನೆ' ಎಂದು ಹೇಳಿದರು.

ಮುಲಾಜಿಲ್ಲದೆ ಕ್ರಮ: `ಯಾವುದೇ ರೀತಿಯ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಂಡು, ದಂಡ ವಿಧಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಜರುಗಿಸುವುದು ಎಂದು ಎಚ್ಚರಿಕೆ ನೀಡಿದ ಯೋಗೇಶ್ವರ್, ರಾಜ್ಯಾದ್ಯಂತ ಪ್ರವಾಸ ಮಾಡಿ ವಿವಿಧ ರೀತಿಯ ಕೈಗಾರಿಕೆಗಳನ್ನು ತಾವೇ ಖುದ್ದಾಗಿ ಪರಿಶೀಲಿಸುತ್ತೇನೆ' ಎಂದು ತಿಳಿಸಿದರು.

`ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಮರಳು, ಕಲ್ಲು, ಗ್ರಾನೈಟ್ ಅನ್ನು ಸಾಗಿಸಲು ಪರ್ಮಿಟ್ ನೀಡುತ್ತಿದ್ದು, ಅದೇ ರೀತಿಯಲ್ಲಿ ಪರಿಸರ ಇಲಾಖೆಯಲ್ಲು ತ್ಯಾಜ್ಯವನ್ನು ವಿಲೇವಾರಿ ಮಾಡಲು ನಿಖರವಾದ ತೂಕ ಮಾಡಿ ಪರ್ಮಿಟ್ ನೀಡುವ ವ್ಯವಸ್ಥೆ ಜಾರಿಗೆ ತರುವುದು ಎಂದ ಅವರು, ಪರಿಸರ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆ ಯಾವುದೇ ಮುಲಾಜಿಲ್ಲದೆ ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ತಾವು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ನೀಡುವುದು' ಎಂದು ಎಚ್ಚರಿಸಿದರು.

`ಕೆ.ಸಿ.ವ್ಯಾಲಿ ಯೋಜನೆಯಡಿ ಮೂರನೇ ಹಂತದ ಸಂಸ್ಕರಣೆ ಮಾಡಿದ ನಂತರ ಕೆರೆಗಳಿಗೆ ನೀರು ತುಂಬಿಸಬೇಕು. ಕೆ.ಸಿ.ವ್ಯಾಲಿ ಯೋಜನೆಯಡಿ ಕೋಲಾರ ಜಿಲ್ಲೆಯ 129 ಕೆರೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, 84ಕೆರೆಗಳನ್ನು ತುಂಬಿಸಲಾಗಿದೆ. ಆದರೆ, ಮೊದಲ ಹಾಗೂ ಎರಡನೆ ಹಂತದಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ಕೆರೆಗಳನ್ನು ತುಂಬಿಸಿರುವುದರಿಂದ ಆ ಭಾಗದ ಅಂತರ್ಜಲ ವಿಷವಾಗಿ ಮಾರ್ಪಾಡಾಗಿದೆ. ಹೀಗಾಗಿ ಇನ್ನು ಮುಂದೆ ವೈಜ್ಞಾನಿಕವಾಗಿ ಮೂರನೆ ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಿದ ನಂತರವೇ ಕೆರೆಗಳಿಗೆ ನೀರು ತುಂಬಿಸಬೇಕು. ತಪ್ಪಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಕ್ರಮ ಜರುಗಿಸುವುದು. ಇಸ್ರೇಲ್ ತಂತ್ರಜ್ಞಾನ ಬಳಸಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಿದರೇ ನೀರಿನ ಗುಣಮಟ್ಟ ಉತ್ತಮವಾಗಲಿದ್ದು, ಕೃಷಿಗೆ ಬಳಸಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು' ಎಂದು ಯೋಗೇಶ್ವರ್ ತಿಳಿಸಿದರು.

17 ನದಿಗಳ ಪುನಶ್ಚೇತನಕ್ಕೆ ಮಹತ್ವದ ಸಭೆ: `ನಗರ-ಪಟ್ಟಣ ಹಾಗೂ ಹಳ್ಳಿಗಳ ಜನವಸತಿ ಪ್ರದೇಶದಿಂದ ಹಾಗೂ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡದೇ ನದಿಗಳಿಗೆ ನೀರು ಬಿಡಲಾಗಿದ್ದು, ಎಲ್ಲ ನದಿಗಳು ಕಲುಷಿತಗೊಂಡು ನೀರು ಬಳಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿದೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಯೊಂದಿಗೆ ಸಭೆ ನಡೆಸಿ ಜನವಸತಿ ಪ್ರದೇಶ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಣೆ ಮಾಡಿದ ನಂತರ ಉದ್ಯಾನವನ ಹಾಗೂ ಇತರೆ ಸೌಲಭ್ಯಗಳಿಗೆ ನೀರನ್ನು ಬಳಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು' ಎಂದು ಅವರು ತಿಳಿಸಿದರು.

`ಮೈಸೂರಿನ ಲಕ್ಷ್ಮಣತೀರ್ಥ ನದಿ ಮೀತಿ-ಮೀರಿ ಕಲುಷಿತಗೊಂಡಿದ್ದು, ಬಳಕೆಗೆ ಯೋಗ್ಯವಿಲ್ಲದಂತೆ ಆಗಿದೆ. ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ನದಿಗಳು ಕಲುಷಿತಗೊಂಡಿವೆ ಎಂದ ಅವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧೀನದಲ್ಲಿರುವ 9 ಲ್ಯಾಬೋರೇಟರಿಗಳನ್ನು ಮೇಲ್ದರ್ಜೆಗೆರಿಸಲು ನಿರ್ಧಾರ ಕೈಗೊಳ್ಳಲಾಯಿತು. ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು ಹಾಗೂ ದಾವಣಗೆರೆಯಲ್ಲಿ ಎಲ್ಲ ಲ್ಯಾಬೋರೇಟರಿಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ 174 ಹುದ್ದೆಗಳನ್ನು ಮೊದಲ ಹಂತದಲ್ಲಿ ಭರ್ತಿ ಮಾಡಲು ನಿರ್ಧರಿಸಲಾಯಿತು. ಉಳಿದ 150ಕ್ಕೂ ಹೆಚ್ಚಿನ ಹುದ್ದೆಗಳನ್ನು ಎರಡನೇ ಹಂತದಲ್ಲಿ ಭರ್ತಿ ಮಾಡುವುದು ಎಂದ ಅವರು, ಕೈಗಾರಿಕೆಗಳ ಸಮ್ಮತಿ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಶುಲ್ಕ ಪಾವತಿಗೆ 3ತಿಂಗಳ ಸಮಯವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News