ಕಳಸ: ಹಾಡಹಗಲೇ ರಾಜಾರೋಷವಾಗಿ ತಿರುಗಾಡುತ್ತಿರುವ ಆನೆಗಳ ಹಿಂಡು

Update: 2021-07-01 17:33 GMT

ಕಳಸ, ಜು.1: ತಾಲೂಕು ವ್ಯಾಪ್ತಿಯ ಇಡಕಣಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಗುರುವಾರವೂ ಮುಂದುವರಿದ್ದು, ಗ್ರಾಮದ ಮುಖ್ಯ ರಸ್ತೆಯಲ್ಲೇ ಕಾಡಾನೆಗಳು ರಾಜಾರೋಷವಾಗಿ ತಿರುಗಾಡುವ ಮೂಲಕ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ.

ಇತ್ತೀಚೆಗೆ ಕಾಡಾನೆಗಳು ಗ್ರಾಮಸ್ಥರ ತೋಟಗಳಿಗೆ ದಾಳಿ ಮಾಡಿ ಬೆಳೆ ಹಾನಿ ಮಾಡಿದ್ದು, ಕೆಲ ದಿನಗಳವರೆಗೆ ನಾಪತ್ತೆಯಾಗಿದ್ದ ಕಾಡಾನೆಗಳು ಕಳೆದ ಮಂಗಳವಾರ ರಾತ್ರಿಯಿಂದ ಗ್ರಾಮದ ತೋಟಗಳಿಗೆ ಮತ್ತೆ ದಾಳಿ ಇಟ್ಟಿದ್ದು, ಕಾಫಿ, ಅಡಿಕೆ ತೋಟಗಳನ್ನು ತುಳಿದು ಹಾಳುಗೆಡವುತ್ತಿವೆ.

ಕಳಸ ತಾಲೂಕು ವ್ಯಾಪ್ತಿಯ ಇಡಕಣಿ ಗ್ರಾಪಂ ವ್ಯಾಪ್ತಿಯಲ್ಲಿರುವ ಮುಂಡಾನೆ, ಹೆಮ್ಮಕ್ಕಿ, ಮಲ್ಲೇಶನಗುಡ್ಡ, ಬಿಳುಗೂರು, ಕಂಕೋಡು ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿನ ಕಾಫಿ, ಅಡಿಕೆ ತೋಟಗಳಲ್ಲಿ ಕೆಲ ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು ಗ್ರಾಮಸ್ಥರ ನಿದ್ದೆಗೆಡಿಸಿದ್ದವು. ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಗುರುವಾರ ಹಗಲಿನಲ್ಲಿ ಕಂಡು ಬಂದಿದ್ದು, ಗ್ರಾಮಸ್ಥರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.

ಗುರುವಾರ ಬೆಳಗ್ಗೆ ಇಡಕಣಿ ಗ್ರಾಮದ ಅತ್ತಿಕಟ್ಟೆ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ತೋಟದಲ್ಲಿದ್ದ ಹಲಸು, ಬಾಳೆ, ಬಿದಿರು, ಬಸರಿಮರ ಸೇರಿದಂತೆ ವಿವಿಧ ಮರಗಳ ಸುಳಿ, ಎಲೆಗಳನ್ನು ತಿನ್ನುತ್ತಾ ಅಲ್ಲೇ ಬೀಡು ಬಿಟ್ಟಿದ್ದು, ಕಾಡಾನೆಗಳು ತೋಟದಿಂದ ಹೋಗದ ಪರಿಣಾಮ ಸ್ಥಳೀಯ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಗುರುವಾರ ಬೆಳಗ್ಗೆ ಹೆಮ್ಮಕ್ಕಿ ಗ್ರಾಮದ ರಸ್ತೆಯಲ್ಲಿ ಕಾಡಾನೆಗಳು ರಾಜಾರೋಷವಾಗಿ ತಿರುಗಾಡಿದ್ದು, ಈ ವೇಳೆ ಸ್ಥಳೀಯರು ನಾಯಿಗಳನ್ನು ಛೂ ಬಿಟ್ಟು ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕಾಡಿನತ್ತ ಹೋಗದ ಆನೆಗಳು ಸಮೀಪದ ಕಾಫಿ, ಅಡಿಕೆ ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ ಗಿಡಗಳನ್ನು ಹಾಳು ಮಾಡುತ್ತಿದೆ. ತೋಟಗಳಲ್ಲಿರುವ ಹಲಸು, ಬಾಳೆ, ಬಿದಿರುಗಳನ್ನು ತಿನ್ನುತ್ತಾ ತೋಟಗಳಲ್ಲೇ ಬೀಡು ಬಿಟ್ಟಿರುವ ಆನೆಗಳನ್ನು ಸ್ಥಳೀಯರು ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನ ನಡೆಸುತ್ತಿದ್ದರೂ ಆನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ದಾಳಿ ಇಡುತ್ತಾ ಗ್ರಾಮಸ್ಥರೊಂದಿಗೆ ಚೆಲ್ಲಾಟವಾಡುತ್ತಿವೆ. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಕಾಡಾನೆಗಳಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಆನೆಗಳು ಸಾರ್ವಜನಿಕರು ಓಡಾಡುವ ರಸ್ತೆಗಳಲ್ಲೇ ತಿರುಗಾಡುತ್ತಿದ್ದು, ಗ್ರಾಮಸ್ಥರ ಪ್ರಾಣಕ್ಕೆ ಕುತ್ತಾಗುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಓಡಿಸಲು ಕ್ರಮವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೂಡಿಗೆರೆ ಭಾಗದಲ್ಲಿ ಮಾತ್ರವಲ್ಲದೇ ಚಿಕ್ಕಮಗಳೂರು ತಾಲೂಕಿನಲ್ಲೂ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಬುಧವಾರ ರಾತ್ರಿ ತಾಲೂಕಿನ ಹಳಸಬಾಳು ಗ್ರಾಮದ ಪವಿತ್ರ ನಗರದಲ್ಲಿ ಫಯಾಝ್ ಅಹ್ಮದ್ ಎಂಬವರ ಶುಂಠಿ ಗದ್ದೆಗೆ ಆನೆಗಳು ದಾಳಿ ಮಾಡಿದ್ದು, ಸುಮಾರು 2 ಎಕರೆ ಶುಂಠಿ ಬೆಳೆಯನ್ನು ಕಾಡಾನೆಗಳು ತುಳಿದು ಹಾಳು ಮಾಡಿವೆ. ಅಲ್ಲದೇ ತಾಲೂಕಿನ ಮಲ್ಲಂದೂರು ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ತೋಟಕ್ಕೆ ದಾಳಿ ಇಟ್ಟಿದ್ದ ಕಾಡಾನೆಗಳನ್ನು ಓಡಿಸಲು ಮುಂದಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಆನೆಯೊಂದು ಅಟ್ಟಿಸಿಕೊಂಡು ಬಂದಿರುವ ಘಟನೆ ಬುಧವಾರ ನಡೆದಿದೆ. ಸಿಬ್ಬಂದಿ ಕಾಫಿ ತೋಟಗಳ ಮಧ್ಯೆ ಓಡಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿಂಗಳ ಹಿಂದೆ ಆಲ್ದೂರು ಭಾಗದಲ್ಲಿ ತೋಟಕ್ಕೆ ನುಗ್ಗಿದ್ದ ಆನೆಗಳನ್ನು ಓಡಿಸುವ ಸಂದರ್ಭ ಆನೆ ದಾಳಿಗೆ ಸಿಲುಕಿ ಆಲ್ದೂರು ಅರಣ್ಯ ವಲಯದ ಸಿಬ್ಬಂದಿಯೊಬ್ಬರು ಬಲಿಯಾದ ಘಟನೆಯೂ ನಡೆದಿತ್ತು.

ಕಳೆದ ಕೆಲ ದಿನಗಳಿಂದ ಆನೆಗಳು ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆದರೆ ಯಾರಿಗೂ ತೊಂದರೆ ನೀಡಿಲ್ಲ. ಆನೆಗಳು ಅಲ್ಲಿನ ಕಾಡಿನಲ್ಲಿ ಬೀಡು ಬಿಟ್ಟಿವೆ. ಆನೆಗಳು ಹಾವಳಿ ಬಗ್ಗೆ ಗ್ರಾಮಸ್ಥರು ಇದುವರೆಗೂ ಲಿಖಿತ ದೂರು ನೀಡಿಲ್ಲ.
- ಸುಂದರೇಶ್, ಕಳಸ ಉಪ ವಲಯಾರಣ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News