ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ
ಬೆಳಗಾವಿ, ಜು.1: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಂವಿಧಾನವನ್ನು ಅರಿಯಬಹುದು ಎಂದು ಬೈಲೂರಿನ ನಿಷ್ಕಲ ಮಂಟಪ ಹಾಗೂ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಶ್ರೀಗಳು ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲೆಯ ಮುಗುಟಖಾನ್ ಹುಬ್ಬಳ್ಳಿಯ ಹೊಳೆಹೊಸೂರು ರಸ್ತೆಯಲ್ಲಿರುವ ಅನುಭವ ಮಂಟಪದಲ್ಲಿ ಇಂದು 'ಆಜಾದಿ ಕಾ ಅಮೃತ ಮಹೋತ್ಸವ' ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣ ನಿರ್ಮಿಸುತ್ತಿರುವ 'ಸರ್ವರಿಗೂ ಸಂವಿಧಾನ' ನಾಟಕ ತರಬೇತಿ ಹಾಗೂ ಸಿದ್ಧತಾ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು.
ಕಲಾವಿದರು ಯಾವುದೇ ಒಂದು ನಾಟಕವನ್ನು ಆರಂಭಿಸುವ ಮೊದಲು ಅದರ ಇತಿಹಾಸವನ್ನು ಅರಿತಾಗ ಮಾತ್ರ ಪಾತ್ರಗಳಿಗೆ ಜೀವ ತುಂಬಲು ಸಾಧ್ಯ. ನಾಟಕಗಳ ಮೂಲಕ ಜನರಲ್ಲಿ ತಿಳುವಳಿಕೆ, ಜ್ಞಾನವನ್ನು ನೀಡಿ, ಅವರ ಮನಸ್ಸನ್ನು ಪರಿವರ್ತನೆಗೊಳಿಸುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಒಂದು ತಿಂಗಳ ಶಿಬಿರಕ್ಕೆ ಚಾಲನೆ ನೀಡಿದ ಸಾಮಾಜಿಕ ಹೋರಾಟಗಾರರಾದ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ದೇಶದಲ್ಲಿರುವ ಅನಕ್ಷರಸ್ಥ ಜನರಿಗೆ ಜಾನಪದ ಕಲೆಗಳಾದ ಹಾಡು, ನಾಟಕಗಳ ಮೂಲಕ ಸಂವಿಧಾನದ ಕುರಿತು ಅರಿವು ಮೂಡಿಸಲು ಸಾಧ್ಯ. ವಿದ್ಯಾವಂತ ಜನರು ಸಂವಿಧಾನವನ್ನು ಓದಿ ತಿಳಿದುಕೊಂಡಿರುತ್ತಾರೆ. ಆದರೆ ಅನಕ್ಷರಸ್ಥ ಹಾಗೂ ಗ್ರಾಮೀಣ ಪ್ರದೇಶದ ಜನರಿಗೂ ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಸಂವಿಧಾನ ಆಶಯ ವಿವರಿಸಲು ಪ್ರಯತ್ನಿಸುತ್ತಿದೆ. ಅಂಬೇಡ್ಕರ್ ಅವರು ದಲಿತ ಸಮಾಜಕ್ಕೆ ಮಾತ್ರವಲ್ಲದೆ ಇಡೀ ದೇಶದ ಸಮಸ್ತ ಜೀವ ಸಂಕುಲದ ವ್ಯವಸ್ಥಿತವಾದ ಜೀವನಕ್ಕೆ ಒಂದು ಚೌಕಟ್ಟನ್ನು ಒದಗಿಸಿಕೊಟ್ಟ ಸಂವಿಧಾನವನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, ಒಬ್ಬ ವ್ಯಕ್ತಿ ದುರ್ಬಲ ಅಥವಾ ಸಬಲನಾಗಿರಲಿ ಅವನು ತನ್ನ ಗುರಿಯನ್ನು ತಲುಪಲು ಸಂವಿಧಾನ ಸಮಾನವಾದ ಅವಕಾಶ ಹಾಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಮಾನವನಿಗೆ ಅವಶ್ಯವಿರುವ ಸಮಾನವಾದ ಸಮಾಜ ಸ್ಥಾಪಿಸಲು ಸಂವಿಧಾನ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಮಾತನಾಡಿ, ರಂಗಾಯಣಗಳು ಮೂರು ವರ್ಷಕ್ಕೊಮ್ಮೆ ಕಲಾವಿದರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ತರಬೇತಿ ನೀಡಿ, ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳಸಲು ಶ್ರಮಿಸುತ್ತಿವೆ. ಧಾರವಾಡ ರಂಗಾಯಣವು ರಂಗನವಮಿ, ಮಹಿಳೆಯರಿಗಾಗಿ ಮಹಿಳಾ ನಾಟಕೋತ್ಸವ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ರಂಗಕರ್ಮಿ ಮಹಾದೇವ ದೊಡಮನಿ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಜಗದೀಶ ಹಾರುಗೊಪ್ಪ, ಸಾಹಿತಿ ಶಬಾನಾ ಅಣ್ಣಿಗೇರಿ, ಎಂ.ಕೆ ಹುಬ್ಬಳ್ಳಿಯ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಶಾಖಾ ವ್ಯವಸ್ಥಾಪಕ ಮಹರ್ಷಿ ಪುಟ್ಟಾ, ರಂಗಸಮಾಜ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ ಸೇರಿದಂತೆ ಇತರರು ಇದ್ದರು.
ನಾಟಕ ನಿರ್ದೇಶಕರಾದ ಬಾಬಾಸಾಹೇಬ ಕಾಂಬ್ಳೆ, ಸಹನಿರ್ದೇಶಕರಾದ ವಿಜಯ ದೊಡಮನಿ ಇವರನ್ನು ಸನ್ಮಾನಿಸಲಾಯಿತು. ರಂಗಕರ್ಮಿ ಮಹಾದೇವ ದೊಡಮನಿ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು.
ಎಂ.ಕೆ.ಹುಬ್ಬಳ್ಳಿಯಲ್ಲಿ ಸುಮಾರು 25 ದಿನಗಳ ಕಾಲ ಈ ತರಬೇತಿ ಶಿಬಿರ ನಡೆಯಲಿದೆ. ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು, ತಜ್ಞರು ತರಬೇತಿ ನೀಡಲಿದ್ದಾರೆ.