ಸುಳ್ಳು ಮಾಹಿತಿ ನಂಬಿ ಆಹಾರ ಕಿಟ್‌ಗಾಗಿ ಕಾರ್ಮಿಕ ಇಲಾಖೆ ಎದುರು ಜನಸಂದಣಿ, ಕಾರ್ಮಿಕರ ಪ್ರತಿಭಟನೆ

Update: 2021-07-01 18:07 GMT

ಹಾಸನ, ಜು.1: ‘ಕಾರ್ಮಿಕ ಇಲಾಖೆಯಿಂದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಯಾರೋ ಸುಳ್ಳು ಮಾಹಿತಿ ನೀಡಿದ್ದರಿಂದ ಸಾವಿರಾರು ಜನ ಕಾರ್ಮಿಕರು ಗುರುವಾರ ತಮ್ಮ ಕೆಲಸ ಬಿಟ್ಟು ಬೆಳಗಿನಿಂದಲೇ ಜಮಾಯಿಸಿದ್ದರು. ಆದರೆ, ಮಧ್ಯಾಹ್ನವಾದರೂ ಯಾವುದೇ ಕಿಟ್ ವಿತರಿಸದ ಹಿನ್ನೆಲೆಯಲ್ಲಿ ಪ್ರತಿಭಟಿಸಿದ ಘಟನೆ ನಡೆಯಿತು.

'ಕಿಟ್ ವಿತರಣೆ' ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಾವಿರಾರು ಕಟ್ಟಡ ಕಾರ್ಮಿಕರು ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕಚೇರಿ ಬಳಿ ಸೇರಿದರು. ಈ ವೇಳೆ ಕಾರ್ಮಿಕ ಇಲಾಖೆ ಕಚೇರಿ ಎದುರು ನೂಕು ನುಗ್ಗಲು ಉಂಟಾಗಿತ್ತು. ಬಳಿಕ ಸುಮಾರು 3,000 ಸಾವಿರ ಜನರು ಏಕಕಾಲದಲ್ಲಿ ಒಟ್ಟಿಗೆ ಜಮಾಯಿಸಿ ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್ ನೇತೃತ್ವದಲ್ಲಿ ಶಾಸಕ ಮತ್ತು ಕಾರ್ಮಿಕ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಮುಖಂಡರಾದ ಮಹೇಶ್, ಬನವಾಸಿ ರಂಗಸ್ವಾಮಿ ಹಾಗೂ ಜೆಡಿಎಸ್ ಮುಖಂಡ ಅಗಿಲೆ ಯೋಗಿಶ್ ಅವರು ಉಪವಿಭಾಗಧಿಕಾರಿ ಜಗದೀಶ್ ಮತ್ತು ಕಾರ್ಮಿಕ ಇಲಾಖೆ ಆಯುಕ್ತರೊಡನೆ ಮಾತನಾಡಿ, ಇನ್ನೊಂದು ವಾರದಲ್ಲಿ ಆಹಾರದ ಕಿಟ್ ಗಳನ್ನು ಕೊಡುವುದಾಗಿ ಹೇಳಿದ್ದು, ಈ ಬಗ್ಗೆ ನಾವು ಮಾಹಿತಿ ಕೊಟ್ಟು ವಿಶಾಲವಾದ ಸ್ಥಳದಲ್ಲಿ ವಿತರಣೆ ಮಾಡಲಾಗುವುದು ಎಂದು ಎಸಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News