×
Ad

ಗೋವಾದಲ್ಲಿ ಕರ್ನಾಟಕ ಮೂಲದ ಮೂವರು ಆತ್ಮಹತ್ಯೆ: ಪೊಲೀಸ್ ಕಿರುಕುಳದ ಬಗ್ಗೆ ತನಿಖೆಗೆ ಕುಮಾರಸ್ವಾಮಿ ಆಗ್ರಹ

Update: 2021-07-02 18:15 IST

ಬೆಂಗಳೂರು, ಜು. 2: 'ಗೋವಾದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಮುದ್ದೇಬಿಹಾಳ ಮೂಲದ ಒಂದೇ ಕುಟುಂಬದ ಮೂವರು ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗೋವಾದಲ್ಲಿ ಕನ್ನಡಿಗರ ಬದುಕು ಎಂತಹ ಡೋಲಾಯಮಾನ ಪರಿಸ್ಥಿತಿಯಲ್ಲಿದೆ, ಅಲ್ಲಿ ಕನ್ನಡಿಗರು ಎಂಥ ಅಪಾಯಕಾರಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ಗೋವಾದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯಗಳಿಗೆ ಕೊನೆಮೊದಲಿಲ್ಲ ಎಂಬಂತಾಗಿದೆ. ಕನ್ನಡಿಗರನ್ನು ಒಕ್ಕಲೆಬ್ಬಿಸುವುದರಿಂದ ಆರಂಭಿಸಿ, ಸಣ್ಣ ಪುಟ್ಟ ಪ್ರಕರಣಗಳಲ್ಲಿ ಸಿಲುಕಿಸುವ ವರೆಗೆ ವಿಧವಿಧದ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಬಗ್ಗೆ ಕರ್ನಾಟಕ ಸರಕಾರವೂ, ಮುಖ್ಯಮಂತ್ರಿ ಯಡಿಯೂರಪ್ಪನವರು ಗಮನಹರಿಸಬೇಕು. ನಾನೂ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುತ್ತೇನೆ' ಎಂದು ತಿಳಿಸಿದ್ದಾರೆ.

'ಮೂವರ ಆತ್ಮಹತ್ಯೆ ನಂತರ ಪೊಲೀಸರೂ ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತರಾತುರಿಯಲ್ಲಿ ಪಂಚನಾಮೆ ನಡೆಸಿದ್ದಾರೆ ಎಂಬ ಆರೋಪ ಸ್ಥಳೀಯ ಕನ್ನಡ ಸಂಘಟನೆಗಳಿಂದ ವ್ಯಕ್ತವಾಗಿದೆ. ಈ ಬಗ್ಗೆ ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕೂಡಲೇ ಗಮನ ಹರಿಸಬೇಕು. ಪೊಲೀಸ್ ಕಿರುಕುಳದ ನಿಟ್ಟಿನಲ್ಲಿ ತನಿಖೆ ನಡೆಯಬೇಕು. ಈ ಮೂಲಕ ಕನ್ನಡಿಗರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು' ಎಂದು ಆಗ್ರಹಿಸಿದ್ದಾರೆ.

'ಪ್ರಕರಣವೊಂದರಲ್ಲಿ ಕನ್ನಡಿಗ ಕುಟುಂಬಕ್ಕೆ ಗೋವಾದ ಪೊಲೀಸರು ಕಿರುಕುಳ ನೀಡಿದ್ದರು ಎಂಬುದು ಅವರ ಡೆತ್‍ನೋಟ್‍ನಲ್ಲೇ ಇದೆ ಎನ್ನಲಾಗಿದೆ. ಕಳ್ಳತನದಂಥ ಭಂಡ ಬಾಳು ಬದುಕಿದ್ದಿದ್ದರೆ ಆ ಕುಟುಂಬ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರುತ್ತಿರಲಿಲ್ಲ. ಕನ್ನಡಿಗರೆಂಬ ಕಾರಣಕ್ಕೆ ಈ ಕುಟುಂಬದ ಮೇಲೆ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ' ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಘಟನೆ ಹಿನ್ನೆಲೆ: ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಮೂಲದ ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಾ ರಾಜ್ಯದ ಜುವಾರಿನಗರ ಬಿರ್ಲಾದಲ್ಲಿ ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಪೊಲೀಸರ ದೌರ್ಜನ್ಯದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News