×
Ad

ಭ್ರಷ್ಟಾಚಾರಿಗಳಿಗೆ ರಾಜ್ಯಪಾಲರು ರಕ್ಷಣೆ ನೀಡುತ್ತಿದ್ದಾರೆ: ವಿ.ಎಸ್.ಉಗ್ರಪ್ಪ ಗಂಭೀರ ಆರೋಪ

Update: 2021-07-02 18:30 IST

ಬೆಂಗಳೂರು, ಜು. 2: `ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಕೋರಿದ್ದ ಅನುಮತಿಯನ್ನು ರಾಜ್ಯಪಾಲರು ಕಾನೂನುಬಾಹಿರವಾಗಿ ನಿರಾಕರಿಸಿ, ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ' ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರ ವಿ.ಎಸ್.ಉಗ್ರಪ್ಪ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಸಚಿವ ಶ್ರೀರಾಮುಲು ಅವರಿಗೆ ಮಾನ-ಮರ್ಯಾದೆ ಇದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಅವರ ಪುತ್ರ, ಮೊಮ್ಮಗ ಹಾಗೂ ಇತರ ಸದಸ್ಯರ ವಿರುದ್ಧ ಬಿಡಿಎ ಅಪಾರ್ಟ್‍ಮೆಂಟ್ ನಿರ್ಮಾಣ ವಿಚಾರದಲ್ಲಿ 25 ಕೋಟಿ ರೂ. ಲಂಚವನ್ನು ಶೆಲ್ ಕಂಪೆನಿಗಳಿಂದ ಆರ್‍ಟಿಜಿಎಸ್ ಮೂಲಕ ಪಡೆದಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು''

''ಇನ್ನು ಭದ್ರಾ ಮೇಲ್ದಂಡೆ ಹಾಗೂ ನೀರಾವರಿ ಇಲಾಖೆ ಟೆಂಡರ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅವರದೇ ಪಕ್ಷದ ಶಾಸಕರು ಹೇಳಿದ್ದಾರೆ. ಇಂದು ರಾಜ್ಯದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದ್ದು, ಇದರ ಉಗಮ ಸ್ಥಾನ ಸಿಎಂ ನಿವಾಸವಾಗಿದೆ. ನಮ್ಮ ಸರಕಾರ ಅಧಿಕಾರದಲ್ಲಿದ್ದ ವೇಳೆ 'ಕಮಿಷನ್ ಸರಕಾರ' ಎಂದಿದ್ದರು. ಆದರೆ ಇಂದು ಅವರದೇ ಪಕ್ಷದ ಶಾಸಕರು ಇವರ 'ಕಮಿಷನ್' ಕಥೆಗಳನ್ನು ಬಿಚ್ಚಿಡುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.

''ಆರ್‍ಟಿಜಿಎಸ್ ಮೂಲಕ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜೆ.ಅಬ್ರಾಹಂ ಎಂಬುವವರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಇಡಿ ಆ ದೂರಿನ ಅನ್ವಯ ಸಿಎಂ ಕುಟುಂಬ ಸದಸ್ಯರ ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಕ್ರಿಮಿನಲ್ ಪ್ರೊಸೀಜರ್ 200 ಅಡಿಯಲ್ಲಿ ಈ ದೂರನ್ನು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪಿಸಿಆರ್ 40/2021ರ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ-19ನೆ ಸೆಕ್ಷನ್ ಅಡಿಯಲ್ಲಿ ವಿಚಾರಣೆ ನಡೆಸಲು ಅನುಮತಿಯನ್ನು ರಾಜ್ಯಪಾಲರು ನೀಡಬೇಕು ಎಂದು ಅಬ್ರಾಹಂ ಅವರು ಮನವಿ ಮಾಡಿದ್ದರು. ಆದರೆ, ರಾಜ್ಯಪಾಲರು ಸುಮಾರು ಎಂಟು ತಿಂಗಳು ಸಮಯಾವಕಾಶ ತೆಗೆದುಕೊಂಡಿದ್ದಾರೆ' ಎಂದು ದೂರಿದರು.

ವ್ಯವಸ್ಥಿತವಾಗಿ ಮುಗಿಸಲಾಗಿದೆ: `ಡಿಸಿಎಂ ಮಾಡುತ್ತೇವೆಂದು ಆಸೆ ತೋರಿಸಿದ ಬಿಜೆಪಿ ನಾಯಕರು ಇಬ್ಬರು ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸುತ್ತಿದ್ದಾರೆ. ಕುರಿಯನ್ನು ಕೊಬ್ಬಿಸಿ ಬಲಿ ಕೊಡುವ ಹಾಗೆ ಇವರನ್ನು ಈಗ ಬಲಿಕೊಟ್ಟಿದ್ದಾರೆ. ಬಳ್ಳಾರಿ ದಣಿಗಳು ಎಂದು ಶ್ರೀರಾಮುಲು ಅವರನ್ನು, ಬೆಳಗಾವಿ ಸಾಹುಕಾರ್ ಎಂದು ರಮೇಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡುತ್ತೇವೆ ಎಂದವರು, ಈಗ ಅವರನ್ನು ಹಂತಹಂತವಾಗಿ ಮುಗಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

ಬೆಳಗಾವಿ ನಾಯಕರೇ ತಮ್ಮ ವಿರುದ್ಧ ಅವರದೇ ಪಕ್ಷದ ನಾಯಕರು ಷಡ್ಯಂತ್ರ ನಡೆಸಿದ್ದಾರೆಂದು ಹೇಳಿದ್ದಾರೆ. ವಾಲ್ಮೀಕಿ ಸಮುದಾಯ ಎಂದರೆ ಪ್ರಾಮಾಣಿಕತೆ ಹಾಗೂ ಬದ್ಧತೆಗೆ ಹೆಸರುವಾಸಿಯಾದ ಸಮಾಜ. ಈ ಇಬ್ಬರು ನಾಯಕರಿಗೆ ಸ್ವಲ್ಪವಾದರೂ ಮಾನ-ಮರ್ಯಾದೆ ಇದ್ದರೆ ಇಷ್ಟು ಹೊತ್ತಿಗೆ ರಾಜೀನಾಮೆ ಕೊಟ್ಟು ಅವರ ವಿರುದ್ಧ ತೊಡೆತಟ್ಟಿ ನಿಲ್ಲಬೇಕಿತ್ತು. ಈ ಷಡ್ಯಂತ್ರದ ವಿರುದ್ಧ ವಾಲ್ಮೀಕಿ ಸಮಾಜ ಬಿಜೆಪಿಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ' ಎಂದು ಅವರು ಎಚ್ಚರಿಸಿದರು.

ಕಲೆಕ್ಷನ್‍ನಲ್ಲಿ ರಾಜ್ಯಪಾಲರಿಗೂ ಪಾಲು ಇದೆಯಾ?

''ಯಾವುದೇ ರಾಜ್ಯಪಾಲರ ಅಧಿಕಾರ ಅವಧಿ 5 ವರ್ಷ. ಒಂದು ವೇಳೆ ಅವರ ಅಧಿಕಾರ ಮುಂದುವರಿಯಬೇಕಾದರೆ ಅಧಿಕಾರ ವಿಸ್ತರಣೆ ಆಗಬೇಕು. ಆದರೆ, ನಮ್ಮ ರಾಜ್ಯಪಾಲರು ಅಧಿಕಾರಕ್ಕೆ ಬಂದು 7 ವರ್ಷವಾಗಿದೆ. ಅಧಿಕಾರ ಅವಧಿ ಮುಗಿದಿದ್ದರೂ ಅಧಿಕಾರ ವಿಸ್ತರಣೆಯನ್ನು ಪಡೆದಿಲ್ಲ, ರಾಜೀನಾಮೆ ಕೊಟ್ಟು ಹೋಗಿಲ್ಲ. ರಾಜ್ಯಪಾಲರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸಿಎಂ ಯಡಿಯೂರಪ್ಪ ಹಾಗೂ ಅವರ ಸಂಪುಟದ ಮಂತ್ರಿಗಳ ಮೇಲೆ ಇರುವ ಪ್ರಕರಣದ ವಿಚಾರಣೆ ನಡೆಸಲು ಏಳುವರೆ ತಿಂಗಳ ನಂತರ ಅನುಮತಿ ನಿರಾಕರಿಸಿದೆ. ಇದು ಬೇಲಿನೆ ಎದ್ದು ಹೊಲ ಮೇಯುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸಾಕ್ಷಿ. ಯಾರು ಸಂವಿಧಾನ ರಕ್ಷಣೆ ಮಾಡಿ, ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ನೀಡಬೇಕಿತ್ತೋ, ಅವರೇ ರಕ್ಷಣೆಗೆ ನಿಂತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಯಡಿಯೂರಪ್ಪನವರ ಕಲೆಕ್ಷನ್‍ನಲ್ಲಿ ರಾಜ್ಯಪಾಲರಿಗೂ ಪಾಲು ಇದೆಯಾ ಎಂದು ಜನಸಾಮಾನ್ಯರು ಮಾತನಾಡುವ ಸ್ಥಿತಿ ನಿರ್ಮಾಣವಾಗಿದೆ' ಎಂದು ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News