ಯಡಿಯೂರಪ್ಪ ಸರಕಾರದಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ: ಸಿದ್ದರಾಮಯ್ಯ ಆರೋಪ
ದಾವಣಗೆರೆ, ಜು.2: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಮಗ ಹಾಗೂ ಅಳಿಯ ಬ್ಯಾಂಕ್ ಮುಖಾಂತರ ಲಂಚ ತೆಗೆದುಕೊಳ್ಳುತ್ತಿದ್ದಾರೆಂಬ ಆರೋಪ ಇದೆ. ಚೆಕ್ ಮೂಲಕ ಲಂಚ ಪಡೆಯುವುದು ಬಿಜೆಪಿಗೆ ಹೊಸದೇನಲ್ಲ. ಬಿಜೆಪಿ ಪಕ್ಷಕ್ಕೆ ಆರ್ಟಿಜಿಎಸ್ ಮೂಲಕವೇ ಹಣ ಪಡೆಯಲಾಗುತ್ತಿದೆ. ಸಿಎಂ ಪುತ್ರ ವಿಜಯೇಂದ್ರ ಡಿಪ್ಯಾಕ್ಟರ್ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಡಿ ಜೀರೋ ಸಿಎಂ ಆಗಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯವೇ? ಅವರೇನು ನಮ್ಮ ಪಕ್ಷದವರೇ ? ಅವರಿಗೂ ನಮಗೂ ಏನು ಸಂಬಂಧ. ಬೇಕು ಅಂತಾನೇ ಸುಳ್ಳು ಹೇಳುತ್ತಾರೆ ಎಂದು ದೂರಿದರು.
ಕಾಂಗ್ರೆಸ್ ನಲ್ಲಿ ನನ್ನ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು, ಮುಂದಿನ ಮುಖ್ಯಮಂತ್ರಿ ನಾನಾಗಬೇಕು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ. ಈಗಲೇ ನಾವು ಏನೂ ಹೇಳಲು ಆಗದು. ಚುನಾವಣೆ ನಡೆಯಬೇಕು, ಶಾಸಕರು ಆಯ್ಕೆಯಾಗಿ ಬಹುಮತ ಬರಬೇಕು. ಬಳಿಕ ಶಾಸಕಾಂಗ ಸಭೆಯಾಗಬೇಕು. ಆಗ ಎಲ್ಲವೂ ನಿರ್ಧಾರ ಆಗಲಿದೆ ಎಂದು ತಿಳಿಸಿದರು.
5 ಲಕ್ಷ ರೂ. ಪರಿಹಾರ ನೀಡಿ: ಕೊರೋನದಿಂದ ಸಾವನ್ನಪ್ಪಿದವರಿಗೆ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು. ಪ್ರವಾಹ ಸೇರಿದಂತೆ ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ಐದು ಲಕ್ಷ ರೂ. ನೀಡಲಾಗುತ್ತೆ. ಅಂತೆಯೇ ಈಗ ಕೊರೋನ ಮಹಾಮಾರಿಯಿಂದ ಸತ್ತವರಿಗೆ ಹೆಚ್ಚಿನ ಪರಿಹಾರ ಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದರು.
ನಾನು ಸರ್ಕಾರಕ್ಕೆ ಎರಡರಿಂದ ಮೂರು ಬಾರಿ ಪತ್ರ ಬರೆದಿದ್ದೇನೆ. ನಾವು ಒತ್ತಾಯಿಸಿದ ಅಂಶಗಳನ್ನೇ ಸುಪ್ರೀಂ ಕೋರ್ಟ್ ಸಹ ಪ್ರಸ್ತಾಪಿಸಿದೆಯಲ್ಲದೇ, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರ ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಇಷ್ಟೊಂದು ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಸರ್ಕಾರ ಹೇಳುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಹೆಚ್.ಆಂಜನೇಯ, ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಉಪಸ್ಥಿತರಿದ್ದರು.
''ಶ್ರೀರಾಮುಲು, ವಿಜಯೇಂದ್ರ ಪಾತ್ರದ ಬಗ್ಗೆಯೂ ತನಿಖೆಯಾಗಲಿ''
ಲಂಚ ಪಡೆದ ಸಿಬ್ಬಂದಿಯನ್ನು ಬಂಧಿಸಿದರಷ್ಟೇ ಸಾಲದು, ಆತ ಯಾರ ಪರವಾಗಿ ಲಂಚ ಪಡೆದಿದ್ದಾನೆ ಮತ್ತು ಪಡೆದಿರುವ ಲಂಚವನ್ನು ಯಾರಿಗೆ ಕೊಟ್ಟಿದ್ದಾನೆ ಎಂಬ ಬಗ್ಗೆಯೂ ತನಿಖೆಯಾಗಬೇಕು. ಈ ಲಂಚ ಹಗರಣದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹೆಸರೂ ತಳುಕು ಹಾಕಿಕೊಂಡಿರುವುದರಿಂದ ಅವರಿಬ್ಬರ ಪಾತ್ರದ ಬಗ್ಗೆಯೂ ತನಿಖೆ ನಡೆದರೆ ಅಸಲಿ ಸತ್ಯ ಹೊರಬರಬಹುದು' ಎಂದು ಒತ್ತಾಯಿಸಿದ್ದಾರೆ.
-ಸಿದ್ದರಾಮಯ್ಯ (ಟ್ವೀಟ್)