ಹೆಲ್ಮೆಟ್ ಏಕೆ ಎಂದು ನಿರ್ಲಕ್ಷಿಸಿದ್ದೇ ತಪ್ಪಾಯಿತು: ಸಂಚಾರಿ ವಿಜಯ್ ಅಪಘಾತ ಪ್ರಕರಣದ ಬಗ್ಗೆ ಬೈಕ್ ಸವಾರ ನವೀನ್

Update: 2021-07-02 14:06 GMT
ಸಂಚಾರಿ ವಿಜಯ್

ಬೆಂಗಳೂರು, ಜು.2: ಕನ್ನಡ ಚಿತ್ರರಂಗದ ನಟ, ದಿವಂಗತ ಸಂಚಾರಿ ವಿಜಯ್ ಬೈಕ್ ಅಪಘಾತ ಪ್ರಕರಣ ಸಂಬಂಧ ಬೈಕ್ ಸವಾರ ನವೀನ್ ಪ್ರತಿಕ್ರಿಯಿ ನೀಡಿದ್ದು, ಮನೆಯ ಹತ್ತಿರದಲ್ಲಿದ್ದ ಔಷಧ ಮಳಿಗೆಗೆ ತೆರಳಲು ಹೆಲ್ಮೆಟ್ ಏಕೆ ಎಂದು ನಿರ್ಲಕ್ಷಿಸಿ ಬೈಕ್‍ನಲ್ಲಿ ಹೋಗಿದ್ದೇ ತಪ್ಪಾಯಿತೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ನವೀನ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅಪಘಾತದ ಮಾಹಿತಿ ಹಂಚಿಕೊಂಡಿದ್ದಾರೆ.

''ಜೂ.12ರಂದು ನಡೆದ ರಸ್ತೆ ಅಪಘಾತದ ಸಂದರ್ಭ ನಾನು ಬೈಕ್ ಚಲಾಯಿಸುತ್ತಿದ್ದೆ. ಹಿಂದೆ ಕುಳಿತಿದ್ದ ಸಂಚಾರಿ ವಿಜಯ್ ತಲೆಗೆ ಮಾರಣಾಂತಿಕ ಪೆಟ್ಟು ಬಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಘಟನೆಗೂ ಮುಂಚೆ ಜೂ.12ರ ರಾತ್ರಿ ಸ್ನೇಹಿತರ ಮನೆಯಲ್ಲಿ ಸೇರಿದ್ದ ಸಭೆಯಲ್ಲಿ ಸಂಚಾರಿ ವಿಜಯ್ ಮತ್ತು ಇತರೆ ಸ್ನೇಹಿತರು ಇದ್ದೆವು. ಕೋವಿಡ್ ಕಿಟ್ ಹಂಚಿಕೆ ಸಂಬಂಧ ಚರ್ಚಿಸಲಾಗಿತ್ತು. ಈ ವೇಳೆ ನನಗೆ ಮನೆಯಿಂದ ಕರೆ ಬಂದಿತ್ತು. ಪತ್ನಿಗೆ ಮಾತ್ರೆಯನ್ನು ತರುವುದಕ್ಕೆ ನಾನು ಹೋಗಬೇಕಾಯಿತು. ಬೈಕ್‍ನಲ್ಲಿ ಹತ್ತಿರದ ಔಷಧಿಯ ಮಳಿಗೆಗೆ ಹೋಗುವಾಗ ಸಂಚಾರಿ ವಿಜಯ್ ಸಹ ನನ್ನ ಜತೆ ಬಂದರು'' ಎಂದು ನವೀನ್ ಹೇಳಿಕೆ ನೀಡಿದ್ದಾರೆ.

''ಮನೆಯ ಹತ್ತಿರವೇ ಮೆಡಿಕಲ್ ಶಾಪ್ ಇದ್ದರಿಂದ ಹೆಲ್ಮೆಟ್ ಹಾಕಲಿಲ್ಲ. ಮಾತ್ರೆ ಖರೀದಿಸಿ ವಾಪಸ್ ಬರಬೇಕಾದರೆ ಅಪಘಾತ ಆಯಿತು. ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿಯಾಗಿತ್ತು'' ಎಂದು ನವೀನ್ ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡು ಸುಮಾರು 20 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನವೀನ್ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಜಯನಗರ ಸಂಚಾರಿ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News