ಕಾಂಗ್ರೆಸ್ ಸರಕಾರ ಬೇಕೆಂಬುದು ಜನರ ಅಪೇಕ್ಷೆ: ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಜು. 2: `ಮುಂದಿನ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಚರ್ಚೆ ಮಾಡಬೇಡಿ ಎಂದು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ನಾನು ಈಗ ಏನು ಹೇಳುವುದಿಲ್ಲ' ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ಓಪನ್ ಹಾರ್ಟೆಡ್ ಏನೇ ಹೇಳಿದರೂ ಓಪನ್ ಆಗಿ ಹೇಳುತ್ತೇನೆ. ಆದರೆ, ನಾನು ಹೇಳಿದ್ದನ್ನು ಕೆಲವರು ತಪ್ಪಾಗಿ ಭಾವಿಸಿದಂತೆ ಕಾಣುತ್ತದೆ. ಇದ್ದದ್ದು ಇದ್ದಂತೆ ಹೇಳಿದ್ದೇನೆ' ಎಂದು ಪ್ರತಿಕ್ರಿಯೆ ನೀಡಿದರು.
`ನಮ್ಮ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಚರ್ಚೆಗೆ ಫುಲ್ ಸ್ಟಾಪ್ ಹಾಕಿ ಎಂದಿದ್ದಾರೆ. ಹೀಗಾಗಿ ನಾನು ಹೇಳಿಕೆಗಳಿಗೆ ಫುಲ್ ಸ್ಟಾಪ್ ಹಾಕಿದ್ದೇನೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಸಿದ್ದರಾಮಯ್ಯ ಅವರ ಸರಕಾರದ ಜನಪರ ಕೆಲಸವನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಸರಕಾರ ಬೇಕು ಎಂಬುದು ಅವರ ಅಪೇಕ್ಷೆ' ಎಂದು ಝಮೀರ್ ಅಹ್ಮದ್ ಖಾನ್ ನುಡಿದರು.
ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರನ್ನ ಮುಖ್ಯಮಂತ್ರಿ ಮಾಡಬೇಕೆಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು. ರಾಜಕಾರಣದಲ್ಲಿ ನಾನಿನ್ನು ಎಲ್‍ಕೆಜಿ ಎಂದು ಸಿ.ಎಂ.ಇಬ್ರಾಹೀಂ ಅವರು ಹೇಳಿದ್ದಾರೆ. ಹೀಗಾಗಿ ನಾನೂ ಆ ಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಇಬ್ರಾಹೀಂ ರಾಜಕಾರಣದಲ್ಲಿ ಪಿಎಚ್‍ಡಿ ಮಾಡಿದ್ದಾರಂತೆ, ಅದನ್ನ ಅವರೇ ಹೇಳಿದ್ದಾರೆ. ತನ್ವೀರ್ ಸೇಠ್ ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ನಮ್ಮಂತವರೂ ಆ ಸ್ಥಾನಕ್ಕೆ ಹೋಗಲು ಸಾಧ್ಯವೇ? ನಾನಿನ್ನೂ ಎಲ್‍ಕೆಜಿ ಅಲ್ವಾ'
-ಬಿ.ಝಡ್.ಝಮೀರ್ ಅಹ್ಮದ್ ಖಾನ್