ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣ ರಾಜ್ಯ ಸರಕಾರಗಳ ಕೈಯಲ್ಲಿದೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Update: 2021-07-02 15:17 GMT

ಬೆಂಗಳೂರು, ಜು. 2: `ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಾಜ್ಯ ಸರಕಾರಗಳ ಸೆಸ್ ಹೆಚ್ಚಳವಾಗಿರುವುದರ ಜತೆಗೆ ಕಚ್ಚಾ ತೈಲದ ಬೆಲೆಯೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಹಂತದಲ್ಲಿ ಪೆಟ್ರೋಲಿಯಂ ದರ ನಿಯಂತ್ರಣ ರಾಜ್ಯ ಸರಕಾರಗಳ ಕೈಯಲ್ಲಿದೆ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, `ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ದೃಷ್ಟಿಯಿಂದ ರಾಜ್ಯಗಳು ತಮ್ಮ ತೆರಿಗೆ ಪಾಲನ್ನು ಕಡಿಮೆ ಮಾಡಬಹುದು. ಮೇಲಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲು ಕೇಂದ್ರ ಸರಕಾರಕ್ಕೆ ಯಾವುದೇ ಅಡ್ಡಿಯಿಲ್ಲ. ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‍ಟಿ ಪಟ್ಟಿಯಲ್ಲಿವೆ. ಆದರೆ, ಅವುಗಳಿಗೆ ಶೂನ್ಯದರ ನಿಗದಿ ಮಾಡಲಾಗಿದೆ. ಜಿಎಸ್‍ಟಿ ದರ ಪ್ರಮಾಣವನ್ನು ಹೆಚ್ಚಳ ಮಾಡಲು ಕಾನೂನು ತಿದ್ದುಪಡಿ ಅಗತ್ಯವಿಲ್ಲ. ಜಿಎಸ್‍ಟಿ ಕೌನ್ಸಿಲ್ ಸಭೆ ಸೇರಿ ಪೆಟ್ರೋಲಿಯಂ ಉತ್ಪನ್ನಗಳ ದರ ನಿಗದಿಗೆ ನಿರ್ಧರಿಸಬಹುದು. ಹೀಗಾಗಿ ಇದು ಈಗ ಜಿಎಸ್‍ಟಿ ಕೌನ್ಸಿಲ್ ಕೈಯಲ್ಲಿದೆ' ಎಂದು ತಿಳಿಸಿದರು.

ಯಾವುದೇ ರಾಜ್ಯಗಳಿಗೆ 2020-21ನೆ ಸಾಲಿನಲ್ಲಿ ಜಿಎಸ್‍ಟಿ ಬಾಕಿ ವಿತರಣೆ ಮಾಡುವುದಿಲ್ಲ. ಬದಲಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಪ್ರಕಾರ ಸಾಲಗಳನ್ನು ಪಡೆದು ಜಿಎಸ್‍ಟಿ ಕೊರತೆ ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸರಕಾರ ಕಾರಣವಲ್ಲ. ದೇಶದ ಬಡ ಜನರಿಗೆ ಸರಕಾರ ಸಹಾಯ ಹಸ್ತ ಚಾಚಿದೆ. ಲಾಕ್‍ಡೌನ್ ಸಂದರ್ಭದಲ್ಲೂ ಉಚಿತ ಆಹಾರ ಪದಾರ್ಥಗಳನ್ನು ವಿತರಿಸಲಾಗಿತ್ತು. ಮೂರು ಎಲ್‍ಪಿಜಿ ಸಿಲೆಂಡರ್ ಗಳನ್ನು ವಿತರಣೆ ಮಾಡಿದ್ದೆವು. ಆದರೂ, ಬೆಲೆ ಏರಿಕೆಯ ಬಿಸಿ ರಾಷ್ಟ್ರದ ಜನರಿಗೆ ತಟ್ಟಬಾರದು ಎಂದು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಅದಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಆದರೆ, ಕೆಲ ಸಂಗತಿಗಳು ನಮ್ಮ ಕೈ ಮೀರಿ ಹೋಗುತ್ತಿವೆ. ಆದರೂ ಅತ್ಯಗತ್ಯ ಆಹಾರ ಪದಾರ್ಥಗಳ ರಫ್ತಿಗೆ ಕಡಿವಾಣ ಹಾಕಲಾಗಿದೆ ಎಂದು ಅವರು ವಿವರಿಸಿದರು.

ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಯಾವುದೇ ಪೂರೈಕೆ ಕೊರತೆ ಮಾಡುತ್ತಿಲ್ಲ. ರಾಜ್ಯ ಸರಕಾರಗಳ ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡಲಾಗುತ್ತದೆ. ಆದರೆ, ಲಸಿಕೆ ಸಂಗ್ರಹ ಮುಗಿಯುವ ಮೊದಲು, ಏಳು ದಿನಗಳು ಮುಂಚಿತವಾಗಿ ರಾಜ್ಯ ಸರಕಾರಗಳು ಕೇಂದ್ರಕ್ಕೆ ಅಗತ್ಯ ಬೇಡಿಕೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸಿದ್ದರಾಮಯ್ಯರಿಗೆ ಮಾಹಿತಿ ಕೊರತೆ: `ಕರ್ನಾಟಕ ರಾಜ್ಯಕ್ಕೆ 14ನೆ ಹಣಕಾಸು ಆಯೋಗದಿಂದ ಬರಬೇಕಾಗಿದ್ದ 5 ಸಾವಿರ ಕೋಟಿ ರೂ.ಗೆ ನಾನು ಅಡ್ಡಿ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಸರಿಯಲ್ಲ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ನಡೆದ ಹಣಕಾಸು ಅಕ್ರಮಗಳ ಬಗ್ಗೆಯೂ ಅವರು ಸ್ವಲ್ಪ ಮಾತನಾಡಲಿ. ಕರ್ನಾಟಕಕ್ಕೆ ತೊಂದರೆ ಮಾಡಬೇಕೆಂದು ನಮ್ಮ ಉದ್ದೇಶವಿರಲಿಲ್ಲ. ರಾಜ್ಯ ಸರಕಾರ ಆದಾಯ ಕೊರತೆ ಪ್ರಮಾಣವನ್ನು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ತೋರಿಸಿದ್ದರಿಂದ ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಹೆಚ್ಚುವರಿ ಹಣಕಾಸು ಬಿಡುಗಡೆ ತಡೆಹಿಡಿಯಲಾಯಿತು. ಹೀಗಿ ಸಿದ್ದರಾಮಯ್ಯನವರು ತಪ್ಪು ಮಾಹಿತಿ ನೀಡಬಾರದು' ಎಂದು ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದರು.

ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬೆಂಗಳೂರಿನಲ್ಲಿ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನ ಠೇವಣಿದಾರರನ್ನ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಬ್ಯಾಂಕ್ ಅನುಸರಿಸುತ್ತಿರುವ ಕಾರ್ಯವಿಧಾನದ ಬಗ್ಗೆ ನಿರ್ವಾಹಕರು ತನ್ನ ವರದಿಯನ್ನು ಆರ್‍ಬಿಐಗೆ ಸಲ್ಲಿಸಿದ ಬಳಿಕ ಈ ವಿಷಯವನ್ನು ತ್ವರಿತಗೊಳಿಸಲು ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು. ಬಸವನಗುಡಿಯಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡಿರುವ ಸಾಲದ ಪ್ರಮಾಣವು ಆರ್‍ಬಿಐ ಮಿತಿಗಿಂತ ಹೆಚ್ಚಾಗಿದ್ದು, ವಸೂಲಾಗದ ಸಾಲ(ಎನ್‍ಪಿಎ) ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ಆರ್‍ಬಿಐ ಬ್ಯಾಂಕಿನ ವ್ಯವಹಾರಕ್ಕೆ ಆರು ತಿಂಗಳು ನಿರ್ಬಂಧ ವಿಧಿಸಿತ್ತು.

ಎಲ್ಲದಕ್ಕೂ ನಾನೇ ಹೊಣೆಯಲ್ಲ: `ನಾನು ಇಲ್ಲಿಂದ ಆಯ್ಕೆ ಆಗಿ ಹೋಗಿದ್ದೇನೆ. ಆದರೆ, ಕ್ಷಮಿಸಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ. ಎಲ್ಲದಕ್ಕೂ ನಾನು ಒಬ್ಬಳೇ ಹೊಣೆ ಅಲ್ಲ. ಇಲ್ಲಿಂದ ಬಹಳ ಜನ ಆಯ್ಕೆ ಆಗಿದ್ದಾರೆ'

-ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News