×
Ad

ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ 2 ತಿಂಗಳು: ಕಾಂಗ್ರೆಸ್ - ಎಸ್ ಡಿಪಿಐ ಪ್ರತ್ಯೇಕ ಪ್ರತಿಭಟನೆ

Update: 2021-07-02 21:16 IST

ಚಾಮರಾಜನಗರ, ಜು.2: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ ಕೋವಿಡ್ ಸೋಂಕಿತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗ್ರಹಿಸಿ ಚಾಮರಾಜನಗರದಲ್ಲಿ ಸರಣಿ ಪ್ರತಿಭಟನೆ ನಡೆಯಿತು.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ನಡೆದು ಇಂದಿಗೆ 60 ದಿನಗಳಾದರೂ ಸಹ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯತನ ತೋರುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆಗ್ರಹಿಸಿ ಪ್ರತಿಭಟನೆಗಳು ನಡೆದವು.

ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿಯ  ವತಿಯಿಂದ ಜಿಲ್ಲಾಸ್ಪತ್ರೆಯ ಹೆಬ್ಬಾಗಿಲಲ್ಲಿ ಕಾಂಗ್ರೆಸ್ ಕಾರ್ಯಕತ್ರರು ಮತ್ತು ಸಂತ್ರಸ್ತ ಕುಟುಂಬದ ಸದಸ್ಯರುಗಳು ಕಪ್ಪುಪಟ್ಟಿ ಧರಿಸಿಕೊಂಡು ಮೌನವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಟಾಸ್ಕ್ ಪೋರ್ಸ್ ಸಮಿತಿ  ಅಧ್ಯಕ್ಷ  ಎಸ್ ಬಾಲರಾಜು ಮಾತನಾಡಿ, ಸರ್ಕಾರಕ್ಕೆ ಕಣ್ಣು ಕಿವಿ ಹೃದಯವಿಲ್ಲ, ಚಾಮರಾಜನಗರದಲ್ಲಿ ದುರ್ಘಟನೆ ನಡೆದು 60 ದಿನಗಳಾದರೂ ಸಂತ್ರಸ್ತ ರ ನೆರವಿಗೆ ಸರ್ಕಾರ ಬಂದಿಲ್ಲ ಎಂದು ಆರೋಪಿಸಿ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುವ ತನಕ ಕಾಂಗ್ರೆಸ್  ಪಕ್ಷ ಹೋರಾಟ ನಿಲ್ಲಿಸದು ಎಂದು ಹೇಳಿದರು.

ಕಾಂಗ್ರೆಸ್ ಪ್ರಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ವಕ್ತಾರ ಕೆರಹಳ್ಳಿ ನವೀನ್, ಮಾಜಿ ತಾಲೂಕು ಪಂಚಾಯತ್  ಅಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ ಮಹಮದ್ ಅಸ್ಗರ್, ಗುರುಸ್ವಾಮಿ, ಮಾದ್ಯಮ ವಕ್ತಾರ ಅರುಣ್ ಹಾಗೂ ಮುಖಂಡರ ಜೊತೆಯಲ್ಲಿ ಸಂತ್ರಸ್ತ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ಇನ್ನೊಂದೆಡೆ ಎಸ್ ಡಿ ಪಿ ಐ ಪಕ್ಷದ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಸಂತ್ರಸ್ತ ಕುಟುಂಬದ ಸದಸ್ಯರೊಂದಿಗೆ ಧರಣಿ ನಡೆಸಿ,  ಆಕ್ಸಿಜನ್ ದುರಂತಕ್ಕೆ ಕಾರಣಕರ್ತರಾಗಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರ ವರ್ಗಾವಣೆ ಮತ್ತು ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರಕ್ಕೆ ಆಗ್ರಹಿಸಿದರು.

ಆಕ್ಸಿಜನ್ ದುರಂತದಲ್ಲಿ ಸರ್ಕಾರವು ನೇರ ಹೊಣೆ ಹೊರಬೇಕು, ಜಿಲ್ಲಾ ಉಸ್ತುವಾರಿ ಸಚಿವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿರುವ ಎಸ್ ಡಿ ಪಿ ಐ ಪ್ರಕರಣದ ತನಿಖೆಯ ಆಯೋಗದ ಕಛೇರಿಯನ್ನು ಮೈಸೂರಿನಲ್ಲಿ ತೆರೆದಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ದುರಂತ ನಡೆದು 6 ದಿನಗಳಾದರೂ ಸಹ ಮಾನವೀಯತೆಗಾದರೂ ಜಿಲ್ಲಾಡಳಿತ ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳುವ ಕೆಲಸ ಮಾಡಲಿಲ್ಲ ಎನ್ನುವ ಸಂತ್ರಸ್ತ ರ ಕುಟುಂಬದ ಸದಸ್ಯರು, ಸರ್ಕಾರ ಮತ್ತು ಜಿಲ್ಲಾಡಳಿತದ ನಡತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ನಗರಸಭಾ ಸದಸ್ಯರಾದ ಮಹೇಶ್ ಗಾಳಿಪುರ, ಸಮೀವುಲ್ಲಾ,ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್, ಜಿ.ಎಂ.ಗಾಡ್ಕರ್, ಸಂಘಸೇನಾ  ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವ ಆಕ್ಸಿಜನ್ ದುರಂತ ಪ್ರಕರಣವು ಜನ ಮನದಲ್ಲಿ ನೆನಪು ಮಾತ್ರ ಇನ್ನೂ ಹಾಗೇ ಉಳಿದು ಕೊಂಡಿದೆ. ಸರ್ಕಾರವು ತಪ್ಪಿತಸ್ಥರ ಮೇಲೆ ಕ್ರಮ ಮತ್ತು ಸಂತ್ರಸ್ತ ರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದಾಗ ಮಾತ್ರ ಸಾಮಾಜಿಕ ನ್ಯಾಯ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News