2 ವರ್ಷಗಳ ಹಿಂದೆ ಅತಿವೃಷ್ಟಿ ಸಂಭವಿಸಿದ್ದ ಗ್ರಾಮಕ್ಕೆ ಸಚಿವ ಅಂಗಾರ ಭೇಟಿ: ಗ್ರಾಮಸ್ಥರಿಂದ ತರಾಟೆ

Update: 2021-07-02 16:15 GMT

ಚಿಕ್ಕಮಗಳೂರು, ಜು.2: ಕಳೆದ ಎರಡು ವರ್ಷಗಳ ಹಿಂದೆ ಅತೀವೃಷ್ಟಿಯಿಂದಾಗಿ ಭಾರೀ ಹಾನಿ ಸಂಭವಿಸಿದ್ದ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಸಂತ್ರಸ್ತರು ತರಾಟೆಗೆ ಪಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.

ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ನಗರದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುಳ್ಯಕ್ಕೆ ತೆರಳಲು ಮೂಡಿಗೆರೆ, ಕಳಸ ಮಾರ್ಗವಾಗಿ ಹೊರಟಿದ್ದ ಅವರು ಶುಕ್ರವಾರ ಮಧ್ಯಾಹ್ನದ ವೇಳೆ ಮಾರ್ಗಮಧ್ಯೆ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದರು.

ಗ್ರಾಮದಲ್ಲಿ ಅತಿವೃಷ್ಟಿಯಿಂದಾದ ಹಾನಿ ಹಾಗೂ ಪರಿಹಾರ ಕ್ರಮಗಳನ್ನು ಪರಿಶೀಲಿಸುತ್ತಿದ್ದ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು, ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ ಅತಿವೃಷ್ಟಿಯಿಂದಾಗಿ ಗ್ರಾಮದಲ್ಲಿ 5 ಮನೆಗಳು ನೆಲಸಮಗೊಂಡಿದ್ದು, 40 ಎಕರೆ ಕೃಷಿ ಭೂಮಿ ಭೂ ಕುಸಿತದಿಂದಾಗಿ ಕೊಚ್ಚಿ ಹೋಗಿದೆ. ಆದರೆ ಇದುವರೆಗೂ ಸಂತ್ರಸ್ತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಮನೆ ಕಳೆದುಕೊಂಡವರ ಸ್ಥಳಾಂತರವಾಗಿಲ್ಲ. ಕೃಷಿ ಭೂಮಿಗೆ ಪರ್ಯಾಯ ಜಮೀನೂ ನೀಡಿಲ್ಲ. ಮನೆ ಕಟ್ಟಿಕೊಳ್ಳಲು ಮುಂದಾದವರಿಗೆ ಪರಿಹಾರದ ಹಣವನ್ನೂ ಸರಿಯಾಗಿ ನೀಡಿಲ್ಲ. 2019ರಲ್ಲಿ ಸಿಎಂ ಭೇಟಿ ನೀಡಿ ಹೋಗಿದ್ದರೂ ಪರಿಹಾರ ಮರೀಚಿಕೆಯಾಗಿದೆ. ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಹೇಳಿ ಬಿಡಿ, ಭಿಕ್ಷೆ ಬೇಡಿಯಾದರೂ ನಾವು ಬದುಕುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಅತಿವೃಷ್ಟಿ ಸಂಭವಿಸಿದ ಬಳಿಕ ಸಿಎಂ ಹಾಗೂ ಯಡಿಯೂರಪ್ಪ, ಕಂದಾಯ ಸಚಿವ ಅಶೋಕ್ ಒಮ್ಮೆ ಭೇಟಿ ನೀಡಿದ್ದರು. ಸೂಕ್ತ ಪರಿಹಾರ, ಪುನರ್ವಸತಿ ನೀಡುವುದಾಗಿ ಭರವಸೆಯನ್ನೂ ನೀಡಿದ್ದರು. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಲಭ್ಯವಾಗಿಲ್ಲ. ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಸಿಎಂ ಬಳಿಕ ಮತ್ತೆ ಯಾವ ಮಂತ್ರಿಗಳು, ಅಧಿಕಾರಿಗಳೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಮನೆ, ಜಮೀನು ಕಳೆದುಕೊಂಡಿದ್ದೇವೆ, ನಾವು ಮನುಷ್ಯರೇ, ನಮಗೆ ಬದುಕುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು.

ಗ್ರಾಮಸ್ಥರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಅಂಗಾರ, ಮಲೆನಾಡು ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಸಮಸ್ಯೆಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಕ್ರಮವಹಿಸಲಾಗುವುದು. ಮಲೇಮನೆ ಗ್ರಾಮದ ಸಮಸ್ಯೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದು, ಪ್ರತ್ಯಕ್ಷವಾಗಿ ಇಲ್ಲಿ ಆಗಿರುವ ಸಮಸ್ಯೆಗಳನ್ನು ಮನಗಂಡು ಸಮಸ್ಯೆಗೆ ಪೂರಕವಾದ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ವಸತಿ, ಜಮೀನು ಕಳೆದುಕೊಂಡ ಸಮಸ್ಯೆಗಳು ಹೆಚ್ಚಾಗಿದ್ದು, ಶೀಘ್ರವಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ ಪರಿಹಾರ ನೀಡಲಾಗುವ ಕಲ್ಪಿಸಲಾಗುವುದು ಎಂದರು,

ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಮಾತನಾಡಿ, ಈ ಭಾಗದಲ್ಲಿ ಮುಖ್ಯವಾಗಿ ಎರಡು ಸಮಸ್ಯೆಗಳಿದ್ದು, ಮಳೆ ಹಾನಿಯಿಂದಾಗಿ ಹಲವಾರು ಮಂದಿ ಮನೆ, ಜಮೀನನ್ನು ಕಳೆದುಕೊಂಡಿದ್ದಾರೆ. ಮನೆಯನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತದಿಂದ ಮನೆ ನೀಡಲಾಗಿದ್ದು, ಆದರೆ ಸರಕಾರದಿಂದ ಗುರುತಿಸಿರುವ ಸ್ಥಳಕ್ಕೆ ಜನರು ಹೋಗದೆ ಮನೆಕಳೆದುಕೊಂಡ ಗ್ರಾಮದೊಳಗೆ ಜಾಗವನ್ನು ನೀಡಿ ಎಂಬ ಬೇಡಿಕೆಯನಿಟ್ಟಿದ್ದಾರೆ, ಆದೇ ರೀತಿ ಜಮೀನನ್ನು ಕಳೆದುಕೊಂಡವರ ಬೇಡಿಕೆ ಇದ್ದು, ಇಲ್ಲಿ ಅರಣ್ಯ ಜಮೀನು ಹೆಚ್ಚಾಗಿರುವುದರಂದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News