ಶಾಲಾ ಕಟ್ಟಡ, ಭೂಮಿಗೆ ತೆರಿಗೆ ವಿಧಿಸಲು ಮುಂದಾದ ಸರಕಾರ: ಕೋರ್ಟ್ ಮೆಟ್ಟಲೇರುವ ಎಚ್ಚರಿಕೆ ನೀಡಿದ 'ರುಪ್ಸಾ'
ಬೆಂಗಳೂರು, ಜು.2: ಶಾಲಾ ಕಟ್ಟಡಗಳು ಮತ್ತು ಭೂಮಿಗೆ ತೆರಿಗೆ ವಿಧಿಸುವ ಸರಕಾರದ ಕ್ರಮಕ್ಕೆ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ(ರುಪ್ಸಾ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಲೇರುವ ಎಚ್ಚರಿಕೆ ನೀಡಿದೆ.
ಟ್ರಸ್ಟ್ ಕಾಯ್ದೆಯಡಿ ಬರುವ ಶೈಕ್ಷಣಿಕ ಸಂಸ್ಥೆಗಳಿಗೆ ಯಾವುದೇ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್ ಸಹ ಎರಡೆರಡು ಪ್ರಕರಣಗಳಲ್ಲಿ ಇಂತಹದೇ ಆದೇಶ ಹೊರಡಿಸಿದೆ. ಸಂವಿಧಾನದ 19 ಮತ್ತು 30ನೆ ವಿಧಿಯನ್ವಯ ಸ್ವಾಯತ್ತ ಸಂಸ್ಥೆಯಾಗಿರುವ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿದ್ದೂ ಸರಕಾರ ತೆರಿಗೆ ವಿಧಿಸಲು ಹೊರಟಿರುವುದು ಖಂಡನೀಯ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಟೀಕಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಲೋಕೇಶ್ ತಾಳಿಕಟ್ಟೆ, ಬಿಬಿಎಂಪಿ ಹೊಸದಾಗಿ ಜಾರಿಗೆ ತರಲು ಹೊರಟಿರುವ ವಿಧೇಯಕದಲ್ಲಿ ಬಹಳ ಜಾಣತನದಿಂದ ಶಿಕ್ಷಣ ಸಂಸ್ಥೆಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಶಾಸನಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರಗೊಂಡಿದ್ದು ಅದಕ್ಕೆ ಮಾನ್ಯತೆ ಇಲ್ಲ. ಹಾಗೊಂದು ವೇಳೆ ಸರಕಾರ ತೆರಿಗೆ ಕಡ್ಡಾಯಗೊಳಿಸಲು ಹೊರಟರೆ ಸರಕಾರಿ ಜಾಗ ಹಾಗೂ ಕಟ್ಟಡದಲ್ಲಿರುವ ಶಾಲೆಗಳ ಮೇಲೂ ತೆರಿಗೆ ವಿಧಿಸಬೇಕಾಗುತ್ತದೆ ಎಂದಿದ್ದಾರೆ.
ಶಿಕ್ಷಣ ಸಂಸ್ಥೆಗಳ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಹೊರಟಿರುವ ಸರಕಾರ ಟ್ರಸ್ಟ್ ಕಾಯ್ದೆ ತೆಗೆದುಹಾಕಿ ಕೈಗಾರಿಕೆ ಕಾಯ್ದೆಯಡಿಗೆ ತರಲಿ ಎಂದಿರುವ ಅವರು, ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.