ಪರವಾನಿಗೆ ಇಲ್ಲದ ಪೆಟ್ ಶಾಪ್‍ಗಳಿಗೆ ಬೀಗ: ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ

Update: 2021-07-02 16:47 GMT

ಬೆಂಗಳೂರು ಜು.2: ರಾಜ್ಯದಲ್ಲಿ ಸಾವಿರಾರು ಪೆಟ್ ಶಾಪ್‍ಗಳು ನಿಯಮಗಳನ್ನು ಪಾಲನೆ ಮಾಡದೆ ಮಳಿಗೆಗಳನ್ನು ನಡೆಸುತ್ತಿದ್ದು, ನೋಂದಣಿ ಆಗದ ಹಾಗೂ ಅವೈಜ್ಞಾನಿಕವಾಗಿ ನಡೆಸುತ್ತಿರುವ ಪೆಟ್ ಶಾಪ್ ಮತ್ತು ನಾಯಿ ತಳಿ ಸಂವರ್ಧನ ಕೇಂದ್ರಗಳ ಮೇಲೆ ಕ್ರಮ ಕೈಗೊಳ್ಳಲು ಶುಕ್ರವಾರ ನಡೆದ ಪ್ರಾಣಿ ಕಲ್ಯಾಣ ಮಂಡಳಿಯ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಪ್ರಾಣಿ ಕಲ್ಯಾಣ ಮಂಡಳಿಯ ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳನ್ನು ಯಾವುದೇ ಪರವಾನಿಗೆ ಹಾಗೂ ನೋಂದಣಿ ಇಲ್ಲದೇ ವ್ಯವಹಾರ ನಡೆಸುತ್ತಿರುವ ಕುರಿತು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರು ತಮ್ಮ ಗಮನಕ್ಕೆ ತಂದಿದ್ದಾರೆ. ಅಂತಹ ಮಳಿಗೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನೋಂದಣಿ ಇಲ್ಲದ ಮಳಿಗೆಗೆ ಬೀಗ: ಕಡ್ಡಾಯವಾಗಿ ಪೆಟ್ ಶಾಪ್ ನಡೆಸುವವರು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಶುಲ್ಕ 5 ಸಾವಿರ ಇದ್ದು 5 ವರ್ಷದ ಅವಧಿಗೆ ಪೆಟ್ ಶಾಪ್ ಗಳಿಗೆ ಹಾಗೂ 2 ವರ್ಷದ ಅವಧಿಗೆ ನಾಯಿ ತಳಿ ಸಂವರ್ಧನಾ ಕೇಂದ್ರಕ್ಕೆ ಅನುಮತಿ ನೀಡಲಾಗುತ್ತದೆ. ಪಶುಸಂಗೋಪನೆ ಇಲಾಖೆಯ ಸ್ಥಳಿಯ ವೈದ್ಯಾಧಿಕಾರಿ ಬಂದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ಮೇಲೆ ಮಾತ್ರ ನೋಂದಣಿ ದೊರೆಯುತ್ತದೆ. ಪ್ರಾಣಿ ಕಲ್ಯಾಣ ಮಂಡಳಿಯ ನೋಂದಣಿ ನೀಡಿದ ನಂತರ ಸ್ಥಳಿಯ ನಗರ ಪಾಲಿಕೆಗಳು ಪರವಾನಗಿ ನೀಡಬೇಕು ಅಲ್ಲದೇ ಅಖಿಲ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಪೆಟ್ ಶಾಪ್ ಮತ್ತು ನಾಯಿ ತಳಿ ಸಂವರ್ಧನಾ ಕೇಂದ್ರಗಳು ಇರಬೇಕು.

ಅನಧಿಕೃತ ನಾಯಿ ತಳಿ ಸಂವರ್ಧನೆಗೆ ಅವಕಾಶವಿಲ್ಲ: ರಾಜ್ಯದಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ತಳಿ ಸಂವರ್ಧನೆಗೆ ನೋಂದಣಿ ಮಾಡಿಕೊಳ್ಳಲು ಆಸಕ್ತಿ ತೋರಿದ್ದಾರೆ. ಆದರೆ ರಾಜ್ಯದಲ್ಲಿ ಅವೈಜ್ಞಾನಿಕವಾಗಿ ನಾಯಿ ತಳಿ ಸಂವರ್ಧನೆ ಮನೆಗಳಲ್ಲಿ, ಫಾರ್ಮಗಳಲ್ಲಿ ನಡೆಯುತ್ತಿದ್ದು ಇವುಗಳಿಗೆ ಪ್ರಾಣಿ ಕಲ್ಯಾಣ ಮಂಡಳಿಯಿಂದ ಕಡಿವಾಣ ಹಾಕಲು ಪಶುಶಂಗೋಪನೆ ಇಲಾಖೆ ಮುಂದಾಗಿದೆ. ದೇಶದಲ್ಲಿ ನಾಯಿ ತಳಿ ವ್ಯಾಪಾರ ಮತ್ತು ವ್ಯವಹಾರ ಅತೀ ದೊಡ್ಡ ಮಟ್ಟದಲ್ಲಿರುವುದರಿಂದ ಹಣದ ಆಸೆಗಾಗಿ ಮುದ್ದು ಪ್ರಾಣಿಗಳನ್ನು ಅವೈಜ್ಞಾನಿಕವಾಗಿ ಸಂವರ್ಧನೆ ನಡೆಸುತ್ತಿರುವುದು ಶೋಚನೀಯ ಎಂದು ಸಚಿವರು ವಿರೋಧ ವ್ಯಕ್ತಪಡಿಸಿದರು.

ಸ್ವಂತ ಉದ್ಯೋಗಕ್ಕೆ ಅವಕಾಶ: ರಾಜ್ಯದಲ್ಲಿ ನಾಯಿ, ಮೊಲ, ಬೆಕ್ಕು, ಗಿನಿಪಿಗ್, ಹ್ಯಾಮಸ್ಟರ್ ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳ ತಳಿ ಸಂವರ್ಧನೆ ನಡೆಸಲು ಆಸಕ್ತಿ ಇದ್ದವರಿಗೆ ಪಶುಸಂಗೋಪನೆ ಇಲಾಖೆಯಿಂದ ಉಚಿತವಾಗಿ ತಳಿ ಸಂವರ್ಧನೆಯ ತರಬೇತಿ ನೀಡಲಾಗುತ್ತದೆ. ಜಗತ್ತಿನಾದ್ಯಂತ ಉತ್ತಮ ತಳಿ ಮತ್ತು ಮುದ್ದು ಪ್ರಾಣಿಗಳಿಗೆ ಬೇಡಿಕೆ ಇರುವುದರಿಂದ ಇದನ್ನೆ ಉದ್ಯೋಗ ಮಾಡಿಕೊಳ್ಳುವವರಿಗೆ ಇಲಾಖೆಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಪಶುಸಂಗೋಪನಾ ಇಲಾಖೆಯ ತಳಿ ಸಂವರ್ಧನಾ ಕೇಂದ್ರಗಳು ರಾಜ್ಯಾದ್ಯಂತ ಇರುವುದರಿಂದ ಆಸಕ್ತ ಯುವಕ/ಯುವತಿಯರು ಈ ಕುರಿತಾಗಿ ಮಾಹಿತಿ ಪಡೆದು ಸ್ವಂತ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು.

ಸಭೆಯಲ್ಲಿ ಕಾರ್ಕಳದ ಶಾಸಕ ಸುನೀಲ್ ಕುಮಾರ್, ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತ ಬಸವರಾಜೇಂದ್ರ, ನಿರ್ದೇಶಕರಾದ ಮಂಜುನಾಥ ಪಾಳೇಗಾರ ಅವರು ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News