×
Ad

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ನಿರ್ಬಂಧಕಾಜ್ಞೆ ಪಡೆದ ಕೇಂದ್ರ ಸಚಿವ ಸದಾನಂದ ಗೌಡ

Update: 2021-07-02 22:19 IST

ಬೆಂಗಳೂರು, ಜು.2: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ತನಿಖೆ ಪ್ರಗತಿಯಲ್ಲಿದ್ದು, ಇದರ ನಡುವೆ ಕೇಂದ್ರ ಸಚಿವ ಸದಾನಂದಗೌಡ ಅವರು ತಮ್ಮ ವಿರುದ್ಧ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ನಗರದ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದಾರೆ.

ಈ ಮೂಲಕ ಕೇಂದ್ರ ಸಚಿವ ಸದಾನಂದಗೌಡ ಅವರಿಗೂ ಸೀಡಿ ಭೀತಿ ಶುರುವಾಗಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಯಾವುದೇ ನಕಲಿ ಸಿಡಿ ಸೃಷ್ಟಿಸಿ ಬಿಡುಗಡೆ ಮಾಡಿದರೆ, ಇದರಿಂದ ತಮ್ಮ ಚಾರಿತ್ರ್ಯವಧೆಯಾಗಲಿದೆ ಎಂದು ಅರ್ಜಿಯಲ್ಲಿ ಡಿವಿಎಸ್ ಅವರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ತಿಂಗಳುಗಳ ಹಿಂದೆ ಶಾಸಕ ರಮೇಶ್ ಜಾರಕಿಹೊಳಿಯ ಅಶ್ಲೀಲ ಸೀಡಿ ಹೊರಬರುತ್ತಿದ್ದಂತೆ, ಸಚಿವರಾದ ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜು, ಕೆ. ಸುಧಾಕರ್, ಎಸ್.ಟಿ.ಸೋಮಶೇಖರ್ ಹಾಗೂ ನಾರಾಯಣ ಗೌಡ ಅವರು ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣಿಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು.

ಕೋರ್ಟ್ ಕೂಡ ಅರ್ಜಿಯನ್ನು ಮಾನ್ಯ ಮಾಡಿ ಮಾನಹಾನಿ ವರದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಈ ಬಗ್ಗೆ ರಾಜ್ಯದ ಎಲ್ಲ ಮಾಧ್ಯಮಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News