×
Ad

ಶೈಕ್ಷಣಿಕ ಗೊಂದಲಗಳ ನಿವಾರಣೆಗೆ ಆಮ್ ಆದ್ಮಿ ಪಕ್ಷದಿಂದ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ

Update: 2021-07-02 22:26 IST

ಬೆಂಗಳೂರು, ಜು.2: ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಶುಲ್ಕಗಳು, ಖಾಸಗಿ ಶಿಕ್ಷಕರ ಸಮಸ್ಯೆ, ಶುಲ್ಕ ನಿಯಂತ್ರಣ ಪ್ರಾಧಿಕಾರದ ರಚನೆ ಸೇರಿ ಹಲವಾರು ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರದ ವೈಫಲ್ಯ ಖಂಡಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.

ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಸರಕಾರದ ಹೊಣೆಗೇಡಿತನದ ಪರಿಣಾಮವಾಗಿ ಇಂದು ರಾಜ್ಯದಲ್ಲಿನ ಸರಕಾರಿ ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸಂಕಷ್ಟಕ್ಕೀಡಾಗಿದೆ. ಶಾಲಾ ಶುಲ್ಕಗಳ ವಿಚಾರದಲ್ಲಿಯೂ ಸಹ ಪೋಷಕ ವರ್ಗ ಸಮಸ್ಯೆಗೀಡಾಗಿದೆ ಎಂದರು. 

ಸರಕಾರದ ಈ ಎಲ್ಲಾ ವೈಫಲ್ಯಗಳನ್ನು ಬಗೆಹರಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಸಾವಿರಾರು ಕಾರ್ಯಕರ್ತರು ಸತತ ಹದಿನೈದು ದಿವಸಗಳ ಕಾಲ ರಾಜ್ಯ ವ್ಯಾಪಿ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕನಿಷ್ಠ 5 ಲಕ್ಷ ಮನೆಗಳಿಗೆ ತೆರಳಿ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಾಂದೋಲನ ಕಾರ್ಯಕ್ರಮವನ್ನು ನಡೆಸುವವರಿದ್ದಾರೆ ಎಂದು ಮಾಹಿತಿ ನೀಡಿದರು.

ಜು.5ರಂದು ಈ ಬೃಹತ್ ಅಭಿಯಾನಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅವರು ಚಾಲನೆ ನೀಡಲಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷೆ ಶಾಂತಲಾ ದಾಮ್ಲೆ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News