×
Ad

ಶಿಕ್ಷಣ ಸಚಿವರನ್ನು ವಜಾ ಮಾಡಲು ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಆಗ್ರಹ

Update: 2021-07-02 22:27 IST

ಬೆಂಗಳೂರು, ಜು.2: ಶಿಕ್ಷಣ ಸಚಿವರಾಗಿ ಎಸ್.ಸುರೇಶ್ ಕುಮಾರ್ ಅಧಿಕಾರ ವಹಿಸಿಕೊಂಡಾಗಿನಿಂದ ಖಾಸಗಿ ಶಾಲೆಗಳನ್ನು ನಿರ್ಲಕ್ಷ್ಯ ಹಾಗೂ ತಾರತಮ್ಯ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಣ ಸಚಿವ ಸುರೇಶ್‍ಕುಮಾರ್ ಖಾಸಗಿ ಶಾಲೆಗಳ ಶುಲ್ಕ ವಿವಾದವನ್ನು ಉದ್ದೇಶ ಪೂರ್ವಕವಾಗಿ ಹೆಚ್ಚಿಸಿ ಬಹುತೇಕ ಶಾಲೆಗಳ ಮೇಲೆ ಸಾರ್ವಜನಿಕರ ಆಕ್ರೋಶ ಹೆಚ್ಚುವಂತೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಸರಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಬೇಕೆಂಬ ಏಕೈಕ ಉದ್ದೇಶದಿಂದ ಶಾಲೆಗಳನ್ನೇ ಪ್ರಾರಂಭಿಸದೆ ಕೇವಲ ಹೆಸರಿಗೆ ಮಾತ್ರ ದಾಖಲಾತಿ ಪ್ರಾರಂಭಿಸಿ ಸರಕಾರಿ ಶಾಲೆಗಳಲ್ಲಿ ಹೊಸದಾಗಿ ಸೇರಿರುವ ಹಾಗೂ ಈಗಾಗಲೇ ಇರುವ ಸುಮಾರು 40 ಲಕ್ಷ ಮಕ್ಕಳಿಗೆ ಶಿಕ್ಷಣವನ್ನೇ ನೀಡದೆ ವಂಚಿಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.

ಸರಕಾರಿ ಶಾಲಾ ಮಕ್ಕಳಿಗೆ ಆನ್‍ಲೈನ್ ರೇಡಿಯೋ, ದೂರದರ್ಶನ ಇತ್ಯಾದಿ ಮೂಲಕ ಶಿಕ್ಷಣ ನೀಡುತ್ತೇವೆಂದು ಸುಳ್ಳು ಹೇಳುವ ಸಚಿವ ಸುರೇಶ್‍ ಕುಮಾರ್, ಕಳೆದ ವರ್ಷ ಸುಮಾರು 40 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನೇ ನೀಡಿಲ್ಲ ಎಂಬ ಸತ್ಯ ಅವರ ಇಲಾಖಾ ಸರ್ವೆ ಮಾಹಿತಿಯಲ್ಲಿ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಸಂಕ್ರಾಮಿಕ ರೋಗದಿಂದ ಉದ್ಯೋಗ ಕಳೆದುಕೊಂಡಿರುವ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎರಡು ತಿಂಗಳಾಯಿತು. ಈ ಹಣವನ್ನು ಬಿಡುಗಡೆ ಮಾಡಿಸುವಲ್ಲಿ ಸಚಿವರು ವಿಫಲರಾಗಿದ್ದಾರೆ. ಖಾಸಗಿ ಶಾಲೆಗಳಿಗೆ ಬಾಕಿ ಉಳಿಸಿಕೊಂಡಿರುವ ಆರ್‍ಟಿಇ ಹಣವನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಸಚಿವ ಸುರೇಶ್‍ ಕುಮಾರ್ ತಮ್ಮ ಖಾತೆಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅವರನ್ನು ಕೂಡಲೇ ವಜಾಮಾಡಿ, ಉತ್ತಮರಿಗೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News