ಲಭ್ಯತೆ ಕಡಿಮೆ ಇರುವುದರಿಂದ ಲಸಿಕೆಗಾಗಿ ಕಾಯುವಂತಾಗಿದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

Update: 2021-07-02 17:10 GMT

ಬೆಂಗಳೂರು. ಜು.2: ಬಿಬಿಎಂಪಿ ವ್ಯಾಪ್ತಿಯಲ್ಲಿ 45ವರ್ಷಕ್ಕಿಂತ ಮೇಲ್ಪಟ್ಟಿರುವ ಶೇ.50ರಷ್ಟು ಮಂದಿಗೆ ಮೊದಲ ಡೋಸ್ ಹಾಕಲಾಗಿದೆ. ಇದರ ನಡುವೆಯೇ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಲಭ್ಯತೆ ಕಡಿಮೆ ಇರುವುದರಿಂದ ಲಸಿಕೆಗಾಗಿ ಕಾಯುವಂತಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ 70ಸಾವಿರದಿಂದ 80ಸಾವಿರ ಲಸಿಕೆ ಹಾಕಲಾಗುತ್ತಿದೆ. ಆದರೂ ಲಸಿಕೆಗಾಗಿ ಬೇಡಿಕೆ ಹೆಚ್ಚಿದ್ದು, ಅಷ್ಟೆ ಪ್ರಮಾಣದಲ್ಲಿ ಲಭ್ಯತೆ ಇಲ್ಲ. ನಾವು ಲಸಿಕೆಗಳನ್ನು ಸಂಗ್ರಹಣೆ ಮಾಡುತ್ತಿಲ್ಲ. ರಾಜ್ಯ ಸರಕಾರ ಆಗಿಂದಾಗೆ ಸರಬರಾಜು ಮಾಡುವ ಲಸಿಕೆಗಳನ್ನು ಕೂಡಲೇ ಸಂಬಂಧಿಸಿದ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ನಗರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾದರೂ ಟೆಸ್ಟಿಂಗ್ ಸಂಖ್ಯೆಯಲ್ಲಿ ಇಳಿಕೆ ಮಾಡಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.1ಕ್ಕಿಂತ ಕಡಿಮೆಯಿದೆ. ಬೆಂಗಳೂರಿಗೆ ಹೊರಗಿನಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ ಮಾಡಿಲ್ಲ. ಆದರೆ, ಕೆಲಸ ಮಾಡುವ ಸ್ಥಳಗಳಲ್ಲಿ ಹೊರಗಿನಿಂದ ಬಂದವರಿಗೆ ಕೋವಿಡ್ ಪರೀಕ್ಷೆ ಮಾಡುವಂತೆ ಬೇಡಿಕೆ ಬಂದರೆ ಮೊಬೈಲ್ ಟೆಸ್ಟಿಂಗ್ ತಂಡವನ್ನು ಕಳುಹಿಸಿ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

ಕೋವಿಡ್ ಅನ್‍ಲಾಕ್ 3ಹಂತದಲ್ಲಿ ಸಿನೆಮಾ ಮಂದಿರ, ಮಾಲ್‍ಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲು ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ, ಮಾಲ್‍ಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿದರೂ ಸಿನೆಮಾ ಮಂದಿರಗಳನ್ನು ಈಗಲೇ ತೆರೆಯುವುದಕ್ಕೆ ಅವಕಾಶ ಸಿಗಲಾರದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News