ಸ್ವಾಮಿ ವಿವೇಕಾನಂದರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ ಸ್ಮಾರಕ ನಿರ್ಮಾಣ ವಿವಾದ ಬರುತ್ತಿರಲಿಲ್ಲ: ಪ್ರತಾಪ್ ಸಿಂಹ

Update: 2021-07-02 17:19 GMT

ಮೈಸೂರು,ಜು.2: ಸ್ವಾಮಿ ವಿವೇಕಾನಂದರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ ಇಂದು ಸ್ಮಾರಕ ನಿರ್ಮಾಣದ ವಿವಾದವೇ ಬರುತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಜಾತಿಯ ಐಕಾನ್ ಅಲ್ಲ, ರಾಷ್ಟ್ರದ ಐಕಾನ್, ಅವರು ಯಾವುದೇ ಪ್ರಬಲ ಜಾತಿ, ಜನಾಂಗ, ಸಮುದಾಯಕ್ಕೆ ಸೇರಿದವರಲ್ಲ, ಒಂದು ವೇಳೆ ವಿವೇಕಾನಂದರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ ಇಂದು ಸ್ಮಾರಕ ನಿರ್ಮಾಣದ ವಿವಾದವೇ ಬರುತ್ತಿರಲಿಲ್ಲ. ಸ್ಮಾರಕ ಆದರೂ ನಿರ್ಮಿಸಿ ಪುತ್ಥಳಿ ಬೇಕಾದರೂ ತಂದಿಡಿ ಯಾರೂ ಕೇಳುತ್ತಿರಲಿಲ್ಲ. ಇಷ್ಟು ಹೊತ್ತಿಗೆ ಸ್ಮಾರಕ ನಿರ್ಮಾಣವಾಗಿ ವರ್ಷಗಳೇ ಕಳೆಯುತ್ತಿತ್ತು. ಅವರಿಗೆ ಜಾತಿಯ ಬೆಂಬಲವಿಲ್ಲದ ಕಾರಣ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಇದು ಮೈಸೂರು ನಗರಕ್ಕೆ ಆಗುತ್ತಿರುವ ಅವಮಾನವಾಗಿದೆ ಎಂದು ಹೇಳಿದರು.

ಭಾರತೀಯತೆಯನ್ನು, ಭಾರತೀಯ ಅಂತಸತ್ವವನ್ನು  ಜಗತ್ತಿಗೆ ಪರಿಚಯ ಮಾಡಿಕೊಟ್ಟು ಭಾರತದ ಶ್ರೇಷ್ಠತೆಯನ್ನು, ಹಿರಿಮೆಯನ್ನು ಸಾರಿದ ಮನುಷ್ಯ. ಅವರಿಗೆ ಒಂದು ಸ್ಮಾರಕ ಕಟ್ಟಲು ತಕರಾರೆತ್ತುತ್ತಾರೆ ಅಂತಾದರೆ ಇದು ಮೈಸೂರಿಗರಾಗಿ ನಮಗೆ ನಾಚಿಕೆಗೇಡಿನ ಸಂಗತಿ. ಬೆಂಗಳೂರಿನ ಫ್ಲೈಓವರ್ಗೆ ಹೆಸರಿಡುವ ವಿಚಾರದಲ್ಲೂ ಹೀಗೆ ಮಾಡಿದರು.  ಬಳಿಕ ಸಾವರ್ಕರ್ ಹೆಸರನ್ನು ನಾಮಕರಣ ಮಾಡಲಾಯಿತು. ಮಹಾರಾಜರೇ ವಿವೇಕಾನಂದರನ್ನು ಪ್ರೀತಿ ಗೌರವದಿಂದ ಕಂಡಿದ್ದಾರೆ. ಮಹಾರಾಜರು ಗೌರವ ನೀಡಿದ ವ್ಯಕ್ತಿಯ ಸ್ಮಾತಕ ನಿರ್ಮಿಸುವುದಕ್ಕೆ ವಿರೋಧಿಸುತ್ತಾರೆ ಅಂತಾದರೆ ಎಷ್ಟು ಸಂಕುಚಿತ ಮನಸ್ಸಗಳು ಮೈಸೂರಿನಲ್ಲಿ ಇದ್ದಾವೆ ಅಂತ ಸಾಬೀತಾಗುತ್ತಿದೆ. ಮೈಸೂರಿಗೆ ಒಳ್ಳೆಯ ಹೆಸರು ತರುವ ಬೆಳವಣಿಗೆ ಅಲ್ಲ.   ಬೇಕಾದರೆ ಈ ಶಾಲೆಯನ್ನು ಮುಂಭಾಗದ ಕಟ್ಟಡಕ್ಕೆ ಸ್ಥಳಾಂತರಿಸಬಹುದು. ಕೂಗಳತೆಯ ದೇವರಾಜ ಶಾಲೆಗೆ ವರ್ಗಾಯಿಸಬಹುದು. ಈ ಸರ್ಕಾರಿ ಶಾಲೆಯ ಜಾಗ ಹಸ್ತಾಂತರಕ್ಕೆ ಸಿಎಂ ಆದೇಶ ಮಾಡಿಕೊಡಲಿ. ನಾನು ಕೇವಲ 2ಗಂಟೆಯಲ್ಲಿ ಕನ್ನಡ ಮಕ್ಕಳಿಗೆ ಅನ್ಯಾಯವಾಗದಂತೆ ಶಾಲೆಯನ್ನು ಸ್ಥಳಾಂತರಿಸಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು. ಸೌಹಾರ್ದಯುತವಾಗಿ ಮಾಡಿಕೊಳ್ಳಬಹುದು, ಅನಗತ್ಯ ತಕರಾರು ಯಾಕೆ ಎಂದು ಪ್ರಶ್ನಿಸಿದರು.   ವಿವೇಕ ಸ್ಮಾರಕ ಕುರಿತು ನಡೆಯುತ್ತಿರುವುದು ಕ್ಷುಲ್ಲಕ ಮನಸ್ಥಿತಿ, ಇದಕ್ಕೆ ಸೊಪ್ಪು ಹಾಕಬೇಡಿ ಎಂದು ಮುಖ್ಯಮಂತ್ರಿಗಳಲ್ಲಿ  ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು,  ರಾಜ್ಯದಲ್ಲಿ ನನಗಿಂತಲೂ ಹಿರಿಯರಿದ್ದಾರೆ. ಅನುಭವಿಗಳು ಸಂಸದರಾಗಿದ್ದಾರೆ. ಅವರೆಲ್ಲರಿಗೂ ನಾನು ಶುಭಾಶಯಗಳನ್ನು ತಿಳಿಸುತ್ತೇನೆ. ನಾನು ಕೂಡ ಆಕಾಂಕ್ಷಿ ಅಂತ ಹೇಳಲು ಇಷ್ಟಪಡಲ್ಲ. ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.
ಮೈಸೂರು ಕೊಡಗಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂಸದನಾಗಿ ನನಗೆ ಇದಕ್ಕಿಂತಲೂ ದೊಡ್ಡ ಹುದ್ದೆ ಬೇರೆ ಯಾವುದೂ ಇಲ್ಲ. ಇದಕ್ಕಿಂತ ನಾನು ಬೇರೇನೂ ನಿರೀಕ್ಷೆಯನ್ನೂ ಮಾಡಲ್ಲ. ನನಗೆ ಇನ್ನೂ ಕೆಲಸ ಮಾಡಲು ಸಮಯ ಬೇಕು. ಮೈಸೂರು, ಕೊಡಗು ಜನತೆಗಳ ಸಹಕಾರ ನನಗೆ ಬೇಕಿದೆ. ಈ ಬಗ್ಗೆ ನಾನು ಇನ್ನೇನು ಹೆಚ್ಚಿಗೆ ಹೇಳಲು ಇಷ್ಟಪಡಲ್ಲ ಎಂದು ತಿಳಿಸಿದರು.

ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದೂ ಇಲ್ಲ, ಮೈಸೂರು ಕೊಡಗು ಭಾಗಕ್ಕೆ ಹೈವೆ, ರೈಲ್ವೆ ತರಲಿಕ್ಕೆ ಇಷ್ಟೆಲ್ಲ ಪ್ರಾಜೆಕ್ಟ್ ಗೆ ನರೇಂದ್ರ ಮೋದಿಯವರು ಸಂಪೂರ್ಣವಾದಂತಹ ಆಶೀರ್ವಾದವನ್ನು ಮಾಡಿದ್ದಾರೆ. ಇದಕ್ಕಿಂತ ಇನ್ನೇನನ್ನೂ ನಾನು ನಿರೀಕ್ಷೆ ಮಾಡಲ್ಲ, ನನಗೆ ಮೈಸೂರು ಹಾಗೂ ಕೊಡಗಿನ ಜನರ ಆಶೋತ್ತರಗಳೇನಿದೆ ಅದನ್ನು ಇನ್ನೂ ಈಡೇರಿಸಲು ಕಾಲಾವಕಾಶ ಬೇಕು. ಮೈಸೂರು ಹಾಗೂ ಕೊಡಗಿಗೆ ಸೀಮಿತವಾಗಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಭಾರತೀಯ ಜನಾಪಕ್ಷಕ್ಕೋಸ್ಕರ ದುಡಿದಂತಹ ಸಾಕಷ್ಟು ಹಿರಿಯರಿದ್ದಾರೆ. ಅನುಭವಿಗಳಿದ್ದಾರೆ. ಅವರಿಗೆ ಸ್ಥಾನಮಾನ ಸಿಗಬೇಕು. ಅವರಿಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದರು.
 
ಮೈಸೂರಿನಲ್ಲಿ ಮತ್ತೊಂದು ಫ್ಲೈಓವರ್ ನಿರ್ಮಾಣಕ್ಕೆ ಮೇಟಗಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಸಂಸದ ಪ್ರತಾಪಸಿಂಹ, ರೈಲ್ವೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಡನೆ ರಾಷ್ಟ್ರೀಯ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಜಯ್ ಕುಮಾರ್ ಸ್ಥಳ ಪರಿಶೀಲಿಸಿದರು. ಈ ವೇಳೆ ಮುಡಾ ಅಧ್ಯಕ್ಷ ರಾಜೀವ್, ಚೆಸ್ಕಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News