'ಸರಕಾರಿ ಹಣ ಲೂಟಿ ಮಾಡಿದ್ದಾರೆ' ಎಂಬ ಅನ್ವರ್ ಮಾಣಿಪ್ಪಾಡಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಾಫಿ ಸಅದಿ

Update: 2021-07-02 17:24 GMT
ಅನ್ವರ್ ಮಾಣಿಪ್ಪಾಡಿ- ಶಾಫಿ ಸಅದಿ

ಬೆಂಗಳೂರು, ಜು.2: ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಎಮ್.ಶಾಫಿ ಸಅದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಹಣವನ್ನು ಲೂಟಿ ಮಾಡಿದ್ದಾರೆ ಎಂಬ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಆರೋಪಕ್ಕೆ ಶಾಫಿ ಸಅದಿ ಅವರು ಪ್ರತಿಕ್ರಿಯೆ ನೀಡಿದ್ದು, ಅಸೂಯೆ ಮತ್ತು ಹತಾಶೆಯನ್ನು ಸಹಿಸಲಾಗದೆ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಂಡು ವಕ್ಫ್ ಮಂಡಳಿಯಿಂದ ಹಣ ಮಂಜೂರು ಮಾಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಎಮ್. ಶಾಫಿ ಸಅದಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ನಿಲುವು ತಿಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಗುರುವಾರ ಸೂಚನೆ ನೀಡಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಅನ್ವರ್ ಮಾಣಿಪ್ಪಾಡಿ ''ಸತ್ಯಮೇವ ಜಯತೆ. ಮಸೀದಿಯ ಕೆಲಸಗಳಿಗಾಗಿ ಸರಕಾರಿ ಹಣವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಾಫಿ ಸಅದಿ ಲೂಟಿ ಮಾಡಿದ್ದಕ್ಕಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದ ಆದೇಶ ಪ್ರಕಾರ ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯತ್ವದಿಂದ ವಜಾಗೊಳಿಸಬೇಕಾಗಿದೆ. ನ್ಯಾಯ ನೀಡಿದ ಸರ್ವಶಕ್ತನಿಗೆ ಧನ್ಯವಾದಗಳು ಎಂದು'' ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಫಿ ಸಅದಿ ಅವರು, 'ಅನ್ವರ್ ಮಾಣಿಪ್ಪಾಡಿಯವರ ಟ್ವೀಟನ್ನು ಗಮನಿಸಿದ್ದೇನೆ. ವಕ್ಫ್ ಬೋರ್ಡ್ ಅಧ್ಯಕ್ಷ ಚುನಾವಣೆಯ ಆತಂಕ, ಅಸೂಯೆ ಮತ್ತು ಹತಾಶೆಯನ್ನು ಸಹಿಸಲಾಗದೆ ಮಾಣಿಪ್ಪಾಡಿ ಮಾಡಿರುವ ಆಧಾರರಹಿತ ಆರೋಪಕ್ಕೆ ಅವರು ಪ್ರಾಯದಲ್ಲಿ ಹಿರಿಯರು ಎಂಬ ಕಾರಣಕ್ಕೆ ಉತ್ತರಿಸಿಲ್ಲ. ಸುಳ್ಳಾರೋಪ ಹರಡುವ ಅವರನ್ನು ನಾನು ಯಾವತ್ತೂ ಕ್ಷಮಿಸುತ್ತೇನೆ. ಆದರೆ ನನ್ನ ಸಹ ಕಾರ್ಯಕರ್ತರು ಕಾನೂನು ಕ್ರಮಕ್ಕಿಳಿದರೆ ನಾನು ಹೊಣೆಯಲ್ಲ ಎಂದು ನೆನಪಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News