ಗೊಗೊಯಿ ಬಿಡುಗಡೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರಿಗೆ ಸಂದ ನ್ಯಾಯ

Update: 2021-07-03 05:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿFull View

ಎನ್‌ಆರ್‌ಸಿಯ ಬೀಜ ಬಿತ್ತಿ ಅದರ ಫಲವನ್ನು ಕೊಯ್ಯುವ ಪ್ರಯೋಗಕ್ಕಾಗಿ ಎನ್‌ಡಿಎ ನೇತೃತ್ವದ ಸರಕಾರ ಮೊದಲು ಆರಿಸಿಕೊಂಡಿದ್ದ ನೆಲ ಅಸ್ಸಾಂ. ಅಸ್ಸಾಂನಲ್ಲಿ ಬಂಗಾಳದ ಅಕ್ರಮ ನಿವಾಸಿಗಳೇ ತುಂಬಿದ್ದಾರೆ ಎಂಬ ವದಂತಿಯನ್ನು ಬಿತ್ತಿ, ಅಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸಲು ಹೊರಟು ಬಿಜೆಪಿ ಕೈ ಸುಟ್ಟುಕೊಂಡಿತು. ಎನ್‌ಆರ್‌ಸಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳೂ ತಮ್ಮ ಪೌರತ್ವವನ್ನು ಕಳೆದುಕೊಳ್ಳಬೇಕಾಗಿ ಬಂದಾಗ, ಅಸ್ಸಾಂ ಕೇಂದ್ರ ಸರಕಾರಕ್ಕೆ ತಿರುಗಿ ಬಿತ್ತು. ಅಸ್ಸಾಂನ ಬಿಜೆಪಿ ಮುಖಂಡರೇ ಎನ್‌ಆರ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದರು. ಈ ಎನ್‌ಆರ್‌ಸಿಯಲ್ಲಾದ ತೊಡಕನ್ನು ನಿವಾರಿಸುವುದಕ್ಕಾಗಿಯೇ ಬಳಿಕ ಸಿಎಎಯನ್ನು ಜಾರಿಗೊಳಿಸಲು ಮುಂದಾಯಿತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮೊದಲು ಪ್ರತಿಭಟನೆಯ ಧ್ವನಿ ಮೊಳಗಿದ್ದೇ ಅಸ್ಸಾಮಿನಿಂದ. ಆ ಬಳಿಕ ಅದು ದೇಶಾದ್ಯಂತ ವ್ಯಾಪಿಸಿತು. ಅಸ್ಸಾಮಿನಲ್ಲಿರುವ ದಿಗ್ಬಂಧನ ಕೇಂದ್ರದಲ್ಲಿ ಅಮಾಯಕ ಹಿಂದೂ, ಮುಸ್ಲಿಮರು ತಮ್ಮ ಪೌರತ್ವ ಸಾಬೀತು ಮಾಡಲಾಗದೆ ಕೊಳೆಯುತ್ತಿದ್ದಾಗ, ಅಸ್ಸಾಂ ಸಾಮಾಜಿಕ ಕಾರ್ಯಕರ್ತರು ಸರಕಾರದ ನೀತಿಯ ವಿರುದ್ಧ ಬೀದಿಗಿಳಿದರು. ಎನ್‌ಆರ್‌ಸಿ ಮೂಲಕ ಅಸ್ಸಾಮಿನಲ್ಲಿ ಹಿಂದೂ-ಮುಸ್ಲಿಮರನ್ನು ಒಡೆಯುವುದಕ್ಕೆ ಸರಕಾರ ಪ್ರಯತ್ನಿಸಿತ್ತು. ಆದರೆ ಪೌರತ್ವ ಕಾಯ್ದೆಯನ್ನು ಹಿಂದು-ಮುಸ್ಲಿಮರು ಜೊತೆಯಾಗಿ ವಿರೋಧಿಸಿದರು. ಈ ಹೋರಾಟದ ಹಿಂದೆ ಹತ್ತು ಹಲವು ಜಾತ್ಯತೀತ ಸಾಮಾಜಿಕ ಕಾರ್ಯಕರ್ತರಿದ್ದರು. ಅವರನ್ನೆಲ್ಲ ಸರಕಾರ ನಕ್ಸಲರು, ದೇಶದ್ರೋಹಿಗಳು ಎಂದು ಬಿಂಬಿಸಲು ಪ್ರಯತ್ನಿಸಿತು. ಸರಕಾರದ ಈ ಸಂಚಿನ ಫಲವಾಗಿ ಜೈಲು ಸೇರಿದವರಲ್ಲಿ ಅಖಿಲ್ ಗೊಗೊಯಿ ಅವರೂ ಒಬ್ಬರು.
2013ರಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಿ ಇವರನ್ನು ಬಂಧಿಸಲಾಗಿತ್ತು. ತನ್ನ ಬಂಧನದ ವಿರುದ್ಧ ಅಖಿಲ್ ಗೊಗೊಯಿ ಅವರು ನ್ಯಾಯಾಲಯದಲ್ಲಿ ಪ್ರಜಾಸತ್ತಾತ್ಮಕ ಹೋರಾಟ ನಡೆಸುತ್ತಲೇ ಬಂದರು. ಇದೇ ಸಂದರ್ಭದಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಜೈಲಲ್ಲಿದ್ದೇ ಅವರು ಸ್ಪರ್ಧಿಸಿದರು. ಯಾವುದೇ ಹಣ ಬಲ, ರಾಜಕೀಯ ಬಲ, ಗೂಂಡಾ ಬಲಗಳಿಲ್ಲದೆಯೇ ಗೊಗೊಯಿ ಅತ್ಯಧಿಕ ಮತಗಳಿಂದ ಗೆದ್ದರು. ಗೊಗೊಯಿಯನ್ನು ದೇಶದ್ರೋಹಿ ಎಂದ ಸರಕಾರಕ್ಕೆ ಈ ಮೂಲಕ ಅತಿ ದೊಡ್ಡ ಮುಖಭಂಗವಾಯಿತು. ಗೊಗೊಯಿ ದೇಶದ್ರೋಹಿಯೇ ಆಗಿದ್ದರೆ ಅವರನ್ನು ಗೆಲ್ಲಿಸಿದ ಅಷ್ಟೂ ಮತದಾರರೂ ದೇಶದ್ರೋಹಿಗಳು ಎಂದಾಯಿತು. ನಿಜಕ್ಕೂ ಎನ್‌ಆರ್‌ಸಿ ಅಸ್ಸಾಮಿನ ಜನರ ಅಗತ್ಯವಾಗಿದ್ದಿದ್ದರೆ ಖಂಡಿತವಾಗಿಯೂ ಗೊಗೊಯಿ ಗೆಲ್ಲುವ ಸಾಧ್ಯತೆಗಳಿರುತ್ತಿರಲಿಲ್ಲ. ಗೊಗೊಯಿಯನ್ನು ಗೆಲ್ಲಿಸುವ ಮೂಲಕ ಅಲ್ಲಿನ ಜನರು ಎನ್‌ಆರ್‌ಸಿ ನಮಗೆ ಬೇಡ ಎನ್ನುವುದನ್ನು ಸ್ಪಷ್ಟವಾಗಿ ಕೇಂದ್ರ ಸರಕಾರಕ್ಕೆ ತಿಳಿಸಿದರು. ಅಷ್ಟೇ ಅಲ್ಲ, ಯಾರು ದೇಶದ್ರೋಹಿ, ಯಾರು ದೇಶಭಕ್ತ ಎನ್ನುವುದು ಕೂಡ ಆ ಚುನಾವಣೆಯಲ್ಲಿ ತೀರ್ಮಾನವಾಯಿತು. ಹೀಗೆ, ಗೊಗೊಯಿ ಅವರ ಬಿಡುಗಡೆಯ ದಾರಿ ಸುಲಭವಾಯಿತು.

ನಿರೀಕ್ಷೆಯಂತೆಯೇ ಗುರುವಾರ ಎನ್‌ಐಎ ನ್ಯಾಯಾಲಯವು ಅಖಿಲ್‌ಗೊಗೊಯಿ ಅವರನ್ನು ಆರೋಪ ಮುಕ್ತಗೊಳಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಾತನಾಡಿದಾಕ್ಷಣ ಅವರು ದೇಶದ್ರೋಹಿಗಳಾಗುವುದಿಲ್ಲ ಎನ್ನುವುದನ್ನು ಎನ್‌ಐಎ ನ್ಯಾಯಾಲಯವೂ ಸರಕಾರಕ್ಕೆ ಈ ಮೂಲಕ ಸ್ಪಷ್ಟ ಪಡಿಸಿದೆ. ಗೊಗೊಯಿ ವಿರುದ್ಧ ಯುಎಪಿಎಯನ್ನು ಹೇರಲಾಗಿತ್ತು. ಅವರ ಜೊತೆಗೆ ಅವರ ಮೂವರು ಸಹಚರರನ್ನೂ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯ ಹೊತ್ತಿಗೆ ಗೊಗೋಯಿ ಸಿಎಎ ಕುರಿತಂತೆ ತನ್ನ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಸಿಎಎ ವಿರುದ್ಧದ ಹೋರಾಟಗಾರರನ್ನು ಬಂಧಿಸಲು ಸರಕಾರ ಅನುಸರಿಸುವ ತಂತ್ರವೆಂದರೆ, ಅವರಿಗೂ ಉಗ್ರವಾದಿಗಳಿಗೂ ನಂಟನ್ನು ಘೋಷಿಸುವುದು. ಆ ಬಳಿಕ ಅವರನ್ನು ಬಂಧಿಸುವುದು.

ಅಸ್ಸಾಂ ಸೇರಿದಂತೆ ಈಶಾನ್ಯ ಭಾಗದ ಹೋರಾಟಗಾರರಿಗೆ ನಕ್ಸಲರ ಸಂಬಂಧವನ್ನು ಬೆಸೆದರೆ, ಕಾಶ್ಮೀರ, ದಿಲ್ಲಿ ಮೊದಲಾದೆಡೆ ಹರಡಿರುವ ಹೋರಾಟಗಾರರಿಗೆ ಸರಕಾರ ಪಾಕಿಸ್ತಾನದ ಜೊತೆಗೆ ಸಂಬಂಧವನ್ನು ಬೆಸೆಯಲು ಯತ್ನಿಸಿತ್ತು. ಸರಕಾರದ ನೀತಿಯ ವಿರುದ್ಧ ಮಾತನಾಡುವವರೆಲ್ಲ ಉಗ್ರರು ಎಂದು ವ್ಯಾಖ್ಯಾನಿಸುವ ಮೂಲಕ, ಸ್ವತಃ ಸರಕಾರವೇ ಜನರನ್ನು ಉಗ್ರವಾದಿ ಗುಂಪುಗಳಿಗೆ ಒಪ್ಪಿಸುವ ಪ್ರಯತ್ನ ನಡೆಸುತ್ತಿತ್ತು. ಗೊಗೊಯಿ ಅವರಿಗೆ ನಕ್ಸಲ್ ಸಂಘಟನೆಯ ಜೊತೆಗೆ ನಂಟಿದೆ ಎಂದು ಎನ್‌ಐಎ ಆರೋಪವನ್ನು ಮಾಡಿತ್ತು. ಆದರೆ ಆರೋಪಗಳೆಲ್ಲ ಸುಳ್ಳು ಎಂದು ಸಾಬೀತಾಗಿದೆ. ಇಂದು ಗೊಗೊಯಿ ಅವರ ಬಿಡುಗಡೆಯು, ಸಿಎಎ ವಿರುದ್ಧ ಪ್ರತಿಭಟನೆ ಮಾಡಿ ಬಂಧನಕ್ಕೊಳಗಾಗಿರುವ ನೂರಾರು ಹೋರಾಟಗಾರರಲ್ಲಿ ನ್ಯಾಯ ವ್ಯವಸ್ಥೆಯ ಕುರಿತಂತೆ ಹೊಸ ನಿರೀಕ್ಷೆಯೊಂದನ್ನು ಹುಟ್ಟಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟಗಾರರು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಸಿಎಎ ಹೋರಾಟದ ಹಿಂದೆ ದೇಶವಿರೋಧಿ ಶಕ್ತಿಗಳಿದ್ದಾರೆ ಎನ್ನುವ ಸರಕಾರದ ವಾದಗಳಿಗೆ ನ್ಯಾಯಾಲಯದ ತೀರ್ಪು ಬಲವಾದ ಹೊಡೆತವನ್ನು ನೀಡಿದೆ. ಈ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಂಬಿ ಹೋರಾಟಕ್ಕಿಳಿದ ಯುವಕರ ತಲೆಗೆ ಉಗ್ರವಾದದ ಹಣೆಪಟ್ಟಿ ಕಟ್ಟಿದ ನಾಯಕರು ದೇಶದ ಕ್ಷಮೆ ಯಾಚನೆ ಮಾಡಬೇಕಾದ ದಿನಗಳು ಹತ್ತಿರವಾಗುತ್ತಿವೆ.

 ಈಗಾಗಲೇ ಸುಪ್ರೀಂಕೋರ್ಟ್ ‘ಪ್ರಜಾಸತ್ತಾತ್ಮಕವಾದ ಹೋರಾಟಗಳು ಮತ್ತು ಭಯೋತ್ಪಾದನೆ’ ಒಂದೇ ಅಲ್ಲ ಎನ್ನುವ ಸಂವಿಧಾನದ ಪ್ರಾಥಮಿಕ ಪಾಠವನ್ನು ಸರಕಾರಕ್ಕೆ ಬೋಧಿಸಿದೆ. ಸರಕಾರದ ನೀತಿಯನ್ನು ಪ್ರಶ್ನಿಸಿದಾಕ್ಷಣ, ಪ್ರತಿಭಟನೆಯ ವೇಳೆ ಅತಿರೇಕಗಳು ಸಂಭವಿಸಿದಾಕ್ಷಣ ಅವರ ಮೇಲೆ ದೇಶದ್ರೋಹದ ಆರೋಪಗಳನ್ನು ಹೊರಿಸುವುದು ತಪ್ಪು ಎಂದು ಸ್ಪಷ್ಟ ಮಾತಿನಲ್ಲಿ ತಿಳಿಸಿದೆ. ಆದರೆ ಇಂದು ಒಬ್ಬ ಗೊಗೊಯಿ ಅಥವಾ ಇನ್ನೊಬ್ಬ ಉಮರ್ ಖಾಲಿದ್‌ಗೆ ನ್ಯಾಯ ಸಿಕ್ಕಿದರೆ ಸಾಕಾಗುವುದಿಲ್ಲ. ಸಿಎಎ ಹೋರಾಟದಲ್ಲಿ ಭಾಗಿಯಾದ ನೂರಾರು ಅಮಾಯಕ ಶ್ರೀಸಾಮಾನ್ಯರು ಬೇರೆ ಬೇರೆ ಮೊಕದ್ದಮೆಗಳನ್ನು ಎದುರಿಸುತ್ತಾ ಜೈಲಿನಲ್ಲಿದ್ದಾರೆ. ಪೊಲೀಸರು ಅವರ ಮೇಲೆ ನಕಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಷ್ಟೇ ಏಕೆ, ದಿಲ್ಲಿ ಹಿಂಸಾಚಾರವನ್ನು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ನಡೆಸಿದವರ ತಲೆಗೆ ಕಟ್ಟುವ ಪ್ರಯತ್ನವೂ ನಡೆದಿದೆ.

ದಿಲ್ಲಿ ಹಿಂಸಾಚಾರಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ಆರೋಪಿಸಿ ನೂರಾರು ಸಿಎಎ ವಿರೋಧಿ ಹೋರಾಟಗಾರರನ್ನು ಬಂಧಿಸಲಾಗಿದೆ. ದಿಲ್ಲಿ ಹಿಂಸಾಚಾರ ನಡೆದಿರುವುದೇ, ಸಿಎಎ ಹೋರಾಟವನ್ನು ದಮನಿಸುವುದಕ್ಕಾಗಿ. ಬಿಜೆಪಿಯ ವಿವಿಧ ಮುಖಂಡರ ಪ್ರಚೋದನಕಾರಿ ಹೇಳಿಕೆಗಳು ದಿಲ್ಲಿ ಗಲಭೆಯನ್ನು ಸೃಷ್ಟಿಸಿದೆ ಎನ್ನುವುದನ್ನು ವಿವಿಧ ಮಾಧ್ಯಮಗಳ ವರದಿಗಳು ಬಹಿರಂಗಪಡಿಸಿವೆ. ಆದರೆ ಪೊಲೀಸರ ಪ್ರಕಾರ, ಸಿಎಎ ಕಾಯ್ದೆಯಿಂದ ಆಕ್ರೋಶಗೊಂಡ ಉಗ್ರವಾದಿಗಳು ದಿಲ್ಲಿ ಹಿಂಸಾಚಾರದ ಸಂಚು ನಡೆಸಿದರು ಎನ್ನುವುದಾಗಿದೆ. ಈ ವಾದದ ಆಧಾರದಲ್ಲಿ ನೂರಾರು ಮುಸ್ಲಿಮ್ ತರುಣರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಇವರೆಲ್ಲರೂ ತಮ್ಮ ಬಿಡುಗಡೆಗಾಗಿ ನ್ಯಾಯಾಲಯದ ಮೇಲೆ ಭರವಸೆಯನ್ನು ಇಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ದೇಶವನ್ನು ಧರ್ಮಾಧಾರಿತವಾಗಿ ವಿಭಜಿಸುವ, ದೇಶದ ಜನರ ಪೌರತ್ವವನ್ನು ಅನುಮಾನಿಸುವ, ದೇಶದೊಳಗೆ ಅರಾಜಕತೆ ಸೃಷ್ಟಿಸುವುದಕ್ಕಾಗಿಯೇ ಜಾರಿಗೆ ತಂದಿರುವ ಸಿಎಎ ಕಾಯ್ದೆಯನ್ನು ಸರಕಾರ ಹಿಂದೆಗೆಯಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯದಿಂದ ಆಶಾದಾಯಕ ತೀರ್ಪೊಂದು ಬರುವವರೆಗೆ, ದೇಶದ ಸಂವಿಧಾನ ಸದಾ ಜೈಲಿನೊಳಗೆ ಬಂದಿಯಾಗಿಯೇ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News