ಸ್ಕೂಟರ್ ಕಳವು ಪ್ರಕರಣ: ಮೂವರ ಸೆರೆ
ಬೆಂಗಳೂರು, ಜು.2: ವ್ಹೀಲಿಂಗ್ ಹಾಗೂ ಜಾಲಿ ರೈಡ್ ಮಾಡಲು ಸ್ಕೂಟರ್ ಗಳನ್ನು ಕಳವು ಮಾಡುತ್ತಿದ್ದ ಆರೋಪ ಸಂಬಂಧ ಮೂವರನ್ನು ನಗರದ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಲಿಂಗರಾಜಪುರಂನ ಜಾನ್ಸಿರಾಂ ಲೇಔಟ್ ನ ವಿಕ್ರಂ(20), ಕಾಕ್ಸ್ಟೌನ್ನ ಮುನಿಯಪ್ಪ ಗಾರ್ಡನ್ ನ ವಿಮಲ್ರಾಜ್(24), ಕದಿರಪ್ಪ ರಸ್ತೆಯ ಸ್ಲಂ ಕ್ವಾಟ್ರಸ್ ನ ವಿನೋದ್(21) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಹಲಸೂರಿನ ಮನೆಯೊಂದರ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು, ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿಕ್ರಂ ಈಗಾಗಲೇ ಪುಲಿಕೇಶಿ ನಗರ ಹಾಗೂ ಕಬ್ಬನ್ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ.
ರಾತ್ರಿ ವೇಳೆ ವ್ಹೀಲಿಂಗ್ ಹಾಗೂ ಜಾಲಿರೈಡ್ಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಪೆಟ್ರೋಲ್ ಖಾಲಿಯಾದಾಗ ಎಲ್ಲೆಂದರಲ್ಲಿ ನಿಲ್ಲಿಸಿ ಪರಾರಿಯಾಗುತ್ತಿದ್ದ. ಮತ್ತೊಬ್ಬ ಆರೋಪಿ ವಿನೋದ್ ಗಾರೆ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಹಣಕಾಸಿನ ತೊಂದರೆಯಿಂದ ವಾಹನ ಕಳ್ಳತನ ಮಾಡುತ್ತಿದ್ದು ಆತನಿಗೆ ಆರೋಪಿ ವಿಮಲ್ ನೆರವು ನೀಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.