×
Ad

ಸಿದ್ಧಾಂತ-ನಾಯಕತ್ವ ಒಪ್ಪುವ ಯಾರೂ ಬೇಕಾದರೂ ಪಕ್ಷ ಸೇರಲು ಅರ್ಜಿ ಹಾಕಬಹುದು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Update: 2021-07-03 16:41 IST

ಬೆಂಗಳೂರು, ಜು. 3: ‘ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ, ಕೆಲಸ ಮಾಡಲು ಇಚ್ಛಿಸುವ ಯಾರೇ ಆದರೂ ಪಕ್ಷ ಸೇರಲು ಅರ್ಜಿ ಹಾಕಬಹುದು. ನಾನು ಕೇವಲ 17 ಜನರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ. ಯಾರೇ ಅರ್ಜಿ ಹಾಕಿದರೂ ಪಕ್ಷ ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಾರು ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ನಂಬಿ ಪಕ್ಷ ಸೇರಲು ಬಯಸುತ್ತಾರೋ ಅವರು ಅಲ್ಲಮ್‌ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಲಿ. ಅವರು ಪರಿಶೀಲಿಸಿ, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ತೆಗೆದುಕೊಳ್ಳಬಾರದು ಎಂದು ನಿರ್ಧರಿಸುತ್ತಾರೆ. ಮುಂದೆ ಯಾವುದೇ ಗೊಂದಲ ಉದ್ಭವಿಸಬಾರದೆಂದು ನಾವು ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಅನಂತರ ರಾಜ್ಯಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾರಿಗೆ ಇಚ್ಛೆ ಇದೆಯೋ ಅವರು ಅರ್ಜಿ ಹಾಕಲಿ, ಆಮೇಲೆ ಆ ಬಗ್ಗೆ ತೀರ್ಮಾನ ಮಾಡೋಣ’ ಎಂದರು.

‘ನಮ್ಮಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಅಭಿಪ್ರಾಯ ಇರುತ್ತದೆ. ಇಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯ ಅಲ್ಲ. ಪಕ್ಷದ ಒಟ್ಟಾರೆ ಅಭಿಪ್ರಾಯ ಮುಖ್ಯ. ಪಕ್ಷ ತೊರೆದು ಮಂತ್ರಿಯಾಗಿರುವ 17 ಜನರಲ್ಲಿ ಯಾರೂ ಪಕ್ಷ ಸೇರುವ ಬಗ್ಗೆ ಸಂಪರ್ಕ ಮಾಡಿಲ್ಲ. ನಾನು ಕೇವಲ ಈ 17 ಜನರನ್ನು ಉದ್ದೇಶಿಸಿ ಮಾತ್ರ ಈ ಮಾತು ಹೇಳುತ್ತಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ನೀವು ಬೇಕಾದರೂ ಅರ್ಜಿ ಹಾಕಿ’ ಎಂದು ಶಿವಕುಮಾರ್ ಹೇಳಿದರು.

‘ರಾಜಕೀಯದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ನಿತ್ಯ ನಡೆಯುತ್ತಿರುತ್ತದೆ. ಇದು ಕೇವಲ ಡಿ.ಕೆ.ಶಿವಕುಮಾರ್ ಅಥವಾ ಕಾಂಗ್ರೆಸ್ ಪಕ್ಷ ಅಂತ ಅಲ್ಲ, ಎಲ್ಲ ಪಕ್ಷದಲ್ಲೂ ಇಂತಹ ಉದಾಹರಣೆಗಳನ್ನು ನೋಡಿದ್ದೇವೆ. ಪ್ರತಾಪಗೌಡ ಪಾಟೀಲ್ ಅವರನ್ನು ನಾವು ಬಿಜೆಪಿಯಿಂದಲೇ ಕರೆ ತಂದಿದ್ದೆವು. ಹೀಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು, ಮರಳುವುದು ರಾಜಕೀಯದಲ್ಲಿ ಸಾಮಾನ್ಯ’ ಎಂದು ಸ್ಪಷ್ಟಣೆ ನೀಡಿದರು.

ಜನರ ಜೀವ ಉಳಿಸಲು ಸರಕಾರ ಏನೇ ಮಾಡಿದರೂ ಸಹಕಾರ ನೀಡುತ್ತೇವೆ:

‘ಸರಕಾರ ಯಾವುದೇ ಜನಪರ ನಿರ್ಧಾರ ತೆಗೆದುಕೊಂಡರೂ ನಾವು ಅಡ್ಡಿ ಮಾಡುವುದಿಲ್ಲ. ಜನರ ಜೀವ ಉಳಿಸಲು ಲಸಿಕೆ ನೀಡಿ, ನೊಂದವರಿಗೆ ಪರಿಹಾರ ನೀಡಿ. ಇದೇ ನಮ್ಮ ಆಗ್ರಹ. ಅಸಂಘಟಿತ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ವೃತ್ತಿ ಅವಲಂಬಿತರಿೆ, ಎಲ್ಲ ಸಮಾಜದವರಿಗೆ, ಕೊರೋನದಿಂದಯಾರು ನೊಂದಿದ್ದಾರೆ, ಸತ್ತಿದ್ದಾರೆಅವರಿಗೆ ಸರಕಾರ ಪರಿಹಾರ ನೀಡಿಲ್ಲ’ ಎಂದು ಅವರು ದೂರಿದರು.

‘ಈಗಲೂ ಜನ ಅರ್ಜಿ ಹಿಡಿದು ಅಲೆದಾಡುವ ಪರಿಸ್ಥಿತಿ ಇದೆ. ಸರಕಾರ ಏಕೆ ಈ ರೀತಿ ತಪ್ಪು ಮಾಡುತ್ತಿದೆಯೋ ಗೊತ್ತಿಲ್ಲ. ಜೀವ ಇದ್ದರೆ ಜೀವನ ಅಂತಾ ನಾನು ಪದೇ ಪದೆ ಹೇಳುತ್ತಿದ್ದೇನೆ. ಇವರು ಬದುಕಿರುವಾಗ ಪರಿಹಾರ ನೀಡಬೇಕೇ ಹೊರತು, ಸತ್ತಾಗ ಕೊಡುವುದಲ್ಲ. ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವವರಿಗೆ ನೆರವಾಗಲಿ. ಅವರು ಅನ್‌ಲಾಕ್ ಆದರೂ ಮಾಡಲಿ, ಬೇರೆ ಏನಾದರೂ ಮಾಡಲಿ, ಜನರಿಗೆ ಒಳ್ಳೆಯದು ಮಾಡಲಿ, ಅಷ್ಟೇ’ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News