ಧ್ವನಿವರ್ಧಕಕ್ಕೆ ನಿಯಂತ್ರಣ ಕೋರಿ ಅರ್ಜಿ: ಒಂದೇ ಧರ್ಮವನ್ನು ಗುರಿಯಾಗಿಸಲು ಅವಕಾಶ ನೀಡುವುದಿಲ್ಲ ಎಂದ ಹೈಕೋರ್ಟ್
ಬೆಂಗಳೂರು, ಜು.3: ಧಾರ್ಮಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಸುವುದಕ್ಕೆ ಸಂಬಂಧಿಸಿದಂತೆ ಕೇವಲ ಒಂದು ಧರ್ಮವನ್ನು ಗುರಿಯಾಗಿಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.
2010ರ ಶಬ್ದ ಮಾಲಿನ್ಯ ನಿಯಂತ್ರಣಾ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಉಲ್ಲಂಘನೆ ಕೇವಲ ಒಂದೇ ಧರ್ಮದಿಂದ ಆಗಿರುವುದಕ್ಕೆ ಸಾಧ್ಯವಿಲ್ಲ. ನೀವು ಕೇವಲ ಒಂದು ಧರ್ಮವನ್ನು ಗುರಿಯಾಗಿಸಿಕೊಂಡಿದ್ದರೆ, ಅದು ನಿಮ್ಮ ಸದುದ್ದೇಶದ ಕೊರತೆಯನ್ನು ತೋರಿಸುತ್ತದೆ ಎಂದು ಪೀಠ ಹೇಳಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಬಿ.ಎನ್.ಜಗದೀಶ್ ಅವರು, ನಾನು ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಕೂಡ ಶಬ್ದ ಮಾಲಿನ್ಯ ನಿಯಂತ್ರಣಾ ನಿಯಮಗಳ ಉಲ್ಲಂಘನೆ ಆಗಿರುವುದರ ಕುರಿತು ಈಗಾಗಲೇ ಪೀಠದ ಗಮನಕ್ಕೆ ತಂದಿದ್ದೇನೆ. ಧಾರ್ಮಿಕ ಸಂಸ್ಥೆಗಳಿಂದ ಧ್ವನಿವರ್ಧಕ ಬಳಕೆ ತಡೆಯುವಂತೆ ಮನವಿ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಸರಕಾರಿ ಪರ ವಕೀಲರು ವಾದಿಸಿ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಪರಿಸರ(ಸಂರಕ್ಷಣೆ) ಕಾಯಿದೆ 1986ರ ಸೆಕ್ಷನ್ 19(ಎ) ಅಡಿಯಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಅವರಿಗೆ ಸರಕಾರ ಈಗಾಗಲೇ ಅಧಿಕಾರ ನೀಡಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಹೇಳಿಕೆಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿತು.
ಕೆಎಸ್‌ಪಿಸಿಬಿ ಹಿರಿಯ ಅಧಿಕಾರಿಯೊಬ್ಬರು ಧಾರ್ಮಿಕ ಸ್ಥಳಗಳಲ್ಲಿ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಅಹವಾಲುಗಳನ್ನು ನಿಭಾಯಿಸಿದ ರೀತಿ ಬಗ್ಗೆ ಕಳೆದ ಎಪ್ರಿಲ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಅಂತಹ ದೂರುಗಳನ್ನು ನಿರ್ವಹಿಸುವಾಗ ಪೋಸ್ಟ್ಮ್ಯಾನ್ ರೀತಿ ವರ್ತಿಸುತ್ತದೆ ಎಂದಿತ್ತು. ಘಟನೆಗೆ ಸಂಬಂಧಿಸಿದಂತೆ ಹಿರಿಯ ಪರಿಸರ ಅಧಿಕಾರಿಯ ಪಾತ್ರ ಪರಿಶೀಲಿಸಿ ಈ ನಿಟ್ಟಿನಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಮಂಡಳಿಯ ಅಧ್ಯಕ್ಷರಿಗೆ ಪೀಠ ಸೂಚಿಸಿತ್ತು. ಆದರೆ, ಅಧ್ಯಕ್ಷರು ಇನ್ನೂ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಪೀಠ ಬಳಿಕ ಪ್ರಮಾಣ ಪತ್ರ ಸಲ್ಲಿಸಲು ಅಧ್ಯಕ್ಷರಿಗೆ ಇನ್ನೂ ಎರಡು ವಾರಗಳ ಕಾಲಾವಕಾಶ ನೀಡಿತ್ತು. ಅದನ್ನು ಉಲ್ಲಂಘಿಸಿದರೆ ಸಿವಿಲ್ ಮಾನನಷ್ಟ ಮೊಕದ್ದಮೆ ಎದುರಿಸಬೇಕಾದೀತು ಎಂದು ಎಚ್ಚರಿಸಿ, ವಿಚಾರಣೆಯನ್ನು ಮುಂದೂಡಿತು.