‘ರಾಜ್ಯಕ್ಕೆ ಒಂದು ರೂಪಾಯಿ ನೀಡಿಲ್ಲ, ಕೊಟ್ಟಿದ್ದರೆ ದಾಖಲೆ ತೋರಿಸಲಿ’: ನಿರ್ಮಲಾ ಸೀತಾರಾಮನ್‌ಗೆ ಸಿದ್ದರಾಮಯ್ಯ ಸವಾಲು

Update: 2021-07-03 12:10 GMT

ಬೆಂಗಳೂರು, ಜು. 3: ‘ಹದಿನೈದನೆ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಕರ್ನಾಟಕಕ್ಕೆ ಬರಬೇಕಿದ್ದ 5,495 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಡೆ ಹಿಡಿದಿದ್ದು ನಿಜ. ಇದು ಆಯೋಗವೇ ನೀಡಿದ ಮಾಹಿತಿ. ಆಯೋಗ ಶಿಫಾರಸು ಮಾಡಿದ ಅನುದಾನದಲ್ಲಿ ಒಂದೇ ಒಂದು ರೂಪಾಯಿ ಕರ್ನಾಟಕಕ್ಕೆ ಕೊಟ್ಟಿಲ್ಲ. ಕೊಟ್ಟಿದ್ದರೆ ದಾಖಲೆ ತೋರಿಸಲಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಶನಿವಾರ ಇಲ್ಲಿನ ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಮಂಜುನಾಥ ನಗರದಲ್ಲಿ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ‘ನಿರ್ಮಲಾ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ದೇಶದ ಹಣಕಾಸು ಸಚಿವರಾಗಿ ಅವರು ತವರು ರಾಜ್ಯಕ್ಕೆ ಅನುದಾನ ಕೊಡುವುದಿಲ್ಲ ಎಂದರೆ ಕೇಂದ್ರದಲ್ಲಿ ಮಂತ್ರಿಯಾಗಲು ಅವರಿಗೆ ಯೋಗ್ಯತೆ ಇದೆಯೇ?’ ಎಂದು ಪ್ರಶ್ನಿಸಿದರು.

‘ಹಣಕಾಸು ಆಯೋಗ ಶಿಫಾರಸು ಮಾಡಿದ ಪ್ರಕಾರ ರಾಜ್ಯಕ್ಕೆ ಹಣ ಕೊಟ್ಟಿದ್ದಾರೆ ಅದು ರಾಜ್ಯ ಸರಕಾರದ ಬೊಕ್ಕಸ ಸೇರಿದ್ದರೆ ಕೊರೋನದ ಸಂಕಷ್ಟದ ಕಾಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಡವರಿಗಾಗಿ ಖರ್ಚು ಮಾಡಬಹುದಿತ್ತು. ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಮೇಲೆ ತೆರಿಗೆ 3.45 ರೂ.ಇತ್ತು, ಈಗ 31.84ರೂ.ಗಳಿಗೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಮೇಲಿನ ತೆರಿಗೆ 9.20 ರೂ.ಗಳಿಂದ, 32.98 ರೂ.ಗಳಿಗೆ ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್ ಅವರೇ ನೀವು ಕೇಂದ್ರ ಹಣಕಾಸು ಸಚಿವರು. ಏರಿಕೆ ಮಾಡಿರುವ ತೆರಿಗೆಯನ್ನು ನೀವೇ ಕಡಿಮೆ ಮಾಡಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

‘ಅಡಿಗೆ ಅನಿಲದ ಬೆಲೆ 414ರೂ.ಗಳಿಂದ 850 ರೂ.ವರೆಗೆ ಹೋಗಿದೆ. ನಿರ್ಮಲಾ ಅವರೇನೋ ಮಂತ್ರಿ. ಅವರಿಗೆ ಜನಸಾಮಾನ್ಯರು ಹಾಗೂ ಬಡವರ ಕಷ್ಟ ಅರ್ಥವಾಗುವುದೇ ಎಂದರು. ಬಜೆಟ್ ಪುಸ್ತಕ ತೆಗೆದು ನೋಡಲಿ ರಾಜ್ಯ ಸರಕಾರ ಈವರೆಗೆ ಒಂದೂವರೆ ಲಕ್ಷ ಕೋಟಿ ರೂ.ಸಾಲ ಮಾಡಿದೆ. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ಏನೂ ಕೊಡಲಿಲ್ಲ. ಬರೀ ಸುಳ್ಳು ಘೋಷಣೆ ಮಾಡುವ ಮೋದಿ, ಯಡಿಯೂರಪ್ಪ ಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ದೇಶದ ಜಿಡಿಪಿ, ಆರ್ಥಿಕ ಪರಿಸ್ಥಿತಿ ಕುರಿತು ಮೋದಿಯವರು ಎಂದಾದರೂ ಮಾತನಾಡಿದ್ದಾರೆಯೇ? ಜಿಡಿಪಿ ಬೆಳವಣಿಗೆ-7.7 ರಷ್ಟಿದೆ. ಇದರಿಂದ ದೇಶ 25 ವರ್ಷಗಳಷ್ಟು ಹಿಂದೆ ಹೋಗಿದೆ. ಅದನ್ನು ಸರಿ ಮಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೇ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಬಡವರಿಗೆ ತಲಾ ಏಳು ಕೆ.ಜಿ. ಅಕ್ಕಿ, ನೀಡಲಾಗುತ್ತಿತ್ತು. ಈಗ 2ಕೆ.ಜಿ.ಗೆ ಇಳಿಸಿದ್ದಾರೆ. ನಮ್ಮ ಸರಕಾರ ಇದ್ದಿದ್ದರೆ 10ಸಾವಿರ ರೂ.ಮತ್ತು 10ಕೆ.ಜಿ. ಅಕ್ಕಿ ಕೊಡುತ್ತಿದ್ದೆವು. ಕೇರಳ ರಕಾರ 26ಸಾವಿರ ಕೋಟಿ ರೂ.ಕೊರೋನ ಪ್ಯಾಕೇಜ್ ಘೋಷಣೆ ಮಾಡಿದೆ. ತಮಿಳುನಾಡು ಸರಕಾರ ಬಡವರಿಗೆ ತಲಾ 4ಸಾವಿರ ರೂ.ಪರಿಹಾರ ನೀಡುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ಲೂಟಿ ಮಾಡುತ್ತಿದ್ದಾರೆಯೇ ಹೊರತು ಬಡವರಿಗೆ ನೆರವಾಗುತ್ತಿಲ್ಲ. ಇನ್ನಾದರೂ ಅವರು ಹಣ ದೋಚುವುದನ್ನು ಬಿಟ್ಟು ಅವರು ಜನರ ಕಡೆಗೆ ನೋಡಲಿ’ ಎಂದು ಸಿದ್ದರಾಮಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ರಾಜಾಜಿನಗರ ಕ್ಷೇತ್ರದ ಶಾಸಕರು ಸುರೇಶ್ ಕುಮಾರ್. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಅವರೇ. ಆಕ್ಸಿಜನ್ ಇಲ್ಲದೆ ಅಲ್ಲಿಯ ಆಸ್ಪತ್ರೆಯಲ್ಲಿ 35 ಮಂದಿ ಸಾವಿಗೀಡಾದರು. ಉಸ್ತುವಾರಿ ಮಂತ್ರಿಯಾಗಿ ಆಕ್ಸಿಜನ್ ಕೊಡಿಸಲು ಅವರಿಂದ ಆಗಲಿಲ್ಲ. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ ಮೂವರು ಮಾತ್ರ ಸತ್ತಿದ್ದಾರೆಂದು ಆರೋಗ್ಯ ಮಂತ್ರಿ ಹೇಳುವಾಗ ಸುರೇಶ್ ಕುಮಾರ್ ಕಣ್ಣುಬಿಟ್ಟುಕೊಂಡು ನೋಡುತ್ತಿದ್ದರು’ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಸಂಸದರಾದ ನಾಸೀರ್ ಹುಸೇನ್, ಚಂದ್ರಶೇಖರ್, ಶಾಸಕ ರಿ ಝ್ವಾನ್ ಅರ್ಶದ್, ಪಾಲಿಕೆ ಮಾಜಿ ಮೇಯರ್ ಪದ್ಮಾವತಿ, ಮಾಜಿ ಸದಸ್ಯ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

 ‘ವಿಜಯೇಂದ್ರ ಹಣ ಲೂಟಿ ಮಾಡುತ್ತಾರೆ. ಅವರೇ ಶ್ರೀರಾಮುಲು ಆಪ್ತ ಸಹಾಯಕನ ವಿರುದ್ಧ ದೂರು ನೀಡುತ್ತಾರೆ. ಮಂತ್ರಿಗಳು, ಅವರ ಪಿಎಗಳು, ಯಡಿಯೂರಪ್ಪ ಮತ್ತವರ ಮಗ ಎಲ್ಲರೂ ಸೇರಿ ಹಣ ದೋಚುತ್ತಿದ್ದಾರೆ 

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News