ಅಪಘಾತ ಪ್ರಕರಣದಲ್ಲಿ ಹೆಚ್ಚುವರಿ ಪರಿಹಾರ ಕೇಳಿದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು, ಜು.3: ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ನ್ಯಾಯಮಂಡಳಿ ನೀಡಿರುವ 20 ಸಾವಿರ ರೂಪಾಯಿ ಪರಿಹಾರ ಬಹಳ ಕಡಿಮೆಯಾಗಿದ್ದು, ಹೆಚ್ಚುವರಿ ಪರಿಹಾರ ನೀಡಲು ಇನ್ಶೂರೆನ್ಸ್ ಕಂಪೆನಿಗೆ ಆದೇಶಿಸಬೇಕು ಎಂದು ಕೋರಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದ ಅರ್ಜಿದಾರನಿಗೆ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ನೀಡಿರುವ ಆದೇಶ ಪ್ರಶ್ನಿಸಿ ಬಳ್ಳಾರಿಯ ವೀರಭದ್ರಯ್ಯ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಮಾಡಿದೆ.
ಅರ್ಜಿದಾರ ವ್ಯಕ್ತಿ ಅಪಘಾತದ ಬಳಿಕ ತನಗೆ ತೀವ್ರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ದೇಹದ ಹಲವು ಅಂಗಾಂಗಗಳು ವೈಫಲ್ಯವಾಗಿವೆ. ಇದರಿಂದಾಗಿ ತನ್ನ ಜೀವಿತಾವಧಿಯೇ ಕಡಿತಗೊಂಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 18 ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರು ಅಪಘಾತದ ಬಳಿಕ ಮೊದಲಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆ ಪ್ರಕಾರ ವೈದ್ಯಾಧಿಕಾರಿ ರೇಡಿಯಾಲಾಜಿಕಲ್ ಪರೀಕ್ಷೆಗಳನ್ನು ನಡೆಸಿದ್ದರ ಆಧಾರದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿ ಕೊಟ್ಟಿದ್ದಾರೆ.
ಅಲ್ಲದೇ, ಅರ್ಜಿದಾರ ವೀರಭದ್ರಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗಿ ಹಾಗೂ ಸುಧೀರ್ಘ ಅವಧಿ ಚಿಕಿತ್ಸೆ ಪಡೆದಿದ್ದಾಗಿ ಹೇಳಿದ್ದಾರೆ. ಆದರೆ, ಈ ಮೊದಲೇ ಇದ್ದ ಹೃದಯ ಸಂಬಂಧಿ ಕಾಯಿಲೆಯನ್ನು ಮುಚ್ಚಿಟ್ಟಿದ್ದಾರೆ. ಗಾಯಾಳುವಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೃದಯ ಸಂಬಂಧಿ ಕಾಯಿಲೆಗಳು ಥಟ್ಟನೆ ಬರುವಂತದ್ದಲ್ಲ ಎಂದು ಹೇಳಿದ್ದಾರೆ. ಇನ್ನು, ಅರ್ಜಿದಾರ ಹೃದಯ ಸಂಬಂಧಿ ಕಾಯಿಲೆಗೆ ಸರಕಾರಿ ಯೋಜನೆ ಅಡಿ ಚಿಕಿತ್ಸೆ ಪಡೆದಿದ್ದು, ದಾಖಲೆಗಳನ್ನು ತಿರುಚಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರನ ಈ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ, ಇನ್ಶೂರೆನ್ಸ್ ಸಂಸ್ಥೆಯು ಅರ್ಜಿದಾರನ ವಿರುದ್ಧ ಹಾಗೂ ಅಂಗಾಂಗ ವೈಫಲ್ಯ ಪ್ರಮಾಣಪತ್ರ ನೀಡಿರುವ ವೈದ್ಯನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಸ್ವತಂತ್ರವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದೇ ವೇಳೆ ಅರ್ಜಿದಾರನ ಸುಳ್ಳು ದಾಖಲೆಗಳ ಕುರಿತು ಬೆಳಕು ಚೆಲ್ಲಿನ ವಿಮಾ ಸಂಸ್ಥೆಯ ವಕೀಲರ ಕುರಿತೂ ಪ್ರಶಂಸಿಸಿದೆ.