ಜು.5ರಿಂದ ರಾಜ್ಯದಲ್ಲಿ ಮಾಲ್‌ಗಳು ತೆರೆಯಲು ಅವಕಾಶ: ವಾರಾಂತ್ಯದ ಕರ್ಫ್ಯೂ ರದ್ದು; ಸಿಎಂ ಯಡಿಯೂರಪ್ಪ ಘೋಷಣೆ

Update: 2021-07-03 15:20 GMT

ಬೆಂಗಳೂರು, ಜು. 3: ಕೋವಿಡ್ ಎರಡನೆ ಅಲೆ ತಡೆಗಟ್ಟಲು ಹೇರಿದ್ದ ನಿರ್ಬಂಧವನ್ನು ಪೂರ್ಣ ಪ್ರಮಾಣದಲ್ಲಿ 'ಅನ್‍ಲಾಕ್-03' ಘೋಷಿಸಿರುವ ರಾಜ್ಯ ಸರಕಾರ, ಜು.5ರಿಂದ ಜು.19ರ ವರೆಗೆ ಸರಕಾರಿ/ಖಾಸಗಿ ಕಚೇರಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ.100ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದು, ಮಾಲ್‍ಗಳನ್ನು ತೆರೆಯಲು ಅನುಮತಿ ನೀಡಿದೆ.

ಶನಿವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, 'ಕೊರೋನ ಕರ್ಫ್ಯೂ (ನೈಟ್ ಕರ್ಫ್ಯೂ) ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೆ, ವಾರಾಂತ್ಯದ(ವಿಕೆಂಡ್) ಕರ್ಫ್ಯೂ ಜಾರಿಯಲ್ಲಿರುವುದಿಲ್ಲ' ಎಂದು ಪ್ರಕಟಿಸಿದರು.

`ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೆಟ್ರೋ ರೈಲು ಸೇರಿದಂತೆ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ಶೇ.100ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಕೇವಲ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಸೇವಾ ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ' ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

`ಮದುವೆ ಸಮಾರಂಭ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಮಾತ್ರ ಅಭ್ಯಾಸ ಮಾಡಲು, ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ 20 ಮಂದಿ ಸದಸ್ಯರಷ್ಟೇ ಭಾಗವಹಿಸಲು ಅನುಮತಿ ನೀಡಲಾಗಿದೆ' ಎಂದು ಯಡಿಯೂರಪ್ಪ ವಿವರ ನೀಡಿದರು.

ನಿರ್ಬಂಧ ಮುಂದುವರಿಕೆ: `ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆ, ಧರಣಿ ಮತ್ತು ಸತ್ಯಾಗ್ರಹಗಳು ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ. ಅಲ್ಲದೆ, ಶಾಲಾ-ಕಾಲೇಜುಗಳ ಸಹಿತ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ಸಭೆ ನಡೆಸಿ ತೀರ್ಮಾನಿಸಲಾಗುವುದು' ಎಂದು ಯಡಿಯೂರಪ್ಪ ಇದೇ ವೇಳೆ ಸ್ಪಷ್ಟಣೆ ನೀಡಿದರು.

`ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಪಬ್-ಕ್ಲಬ್‍ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ' ಎಂದಿರುವ ಯಡಿಯೂರಪ್ಪ, `ಜಿಲ್ಲೆಯಲ್ಲಿರುವ ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ' ಎಂದು ಹೇಳಿದರು. 

`ಕೋವಿಡ್-19 ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸುವ ಮೂಲಕ ರಾಜ್ಯ ಸರಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು' ಎಂದು ಯಡಿಯೂರಪ್ಪ ಕೋರಿದರು.


'ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಹೆಚ್ಚಿರುವ ಕೊಡಗು, ಮೈಸೂರು, ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧ ಸಡಿಲಿಸಿದ್ದು, ನಿರ್ಬಂಧ ಮುಂದುವರಿಸುವ ಸಂಬಂಧ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಿಸಲು ಅಧಿಕಾರ ನೀಡಲಾಗಿದೆ'
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ


'ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅಂಗಡಿ-ಮುಂಗಟ್ಟುಗಳು, ಕಚೇರಿ, ಕೈಗಾರಿಕೆಗಳ ಸಹಿತ ಸಂಪೂರ್ಣ ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ. ಜು.5ರಿಂದ ಜು.19ರ ವರೆಗೆ 15 ದಿನಗಳ ಕಾಲ ಕೋವಿಡ್ ಸೋಂಕಿನ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ನಿರ್ಬಂಧ ಹೇರುವ ಅಥವಾ ಸಡಿಲಿಸುವ ಕುರಿತು ಸಚಿವರು ಹಾಗೂ ತಜ್ಞರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು'
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

►►ಮುಖ್ಯಾಂಶಗಳು:

1. ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. 

2. ಮಾಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. 

3. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ. 100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.

4. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. 

5. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. 

6. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. 

7. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. 
 
8. ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ. 

9. ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9.00 ರಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. 

10. ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ. 

11. ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ. 
 
12. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು.

13. ಪಬ್ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. 

14. ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ. 
 
► ಜಿಲ್ಲೆಯಲ್ಲಿರುವ ಪರಿಸ್ಥಿತಿಗನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ. 

►ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ವಿನಂತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News